Friday 23 December 2011

ಚುಟುಕ.."೧-೨೦"

೧."ಚದುರಂಗ"
"ಆಟದ ಚದುರಂಗ
ಯುದ್ಧದ ರಣರಂಗ
ಗೆದ್ದವ ನಿಜ ರಂಗ
ಸೋತವ ಬರಿ ಪೆಂಗ!"
೨."ರಾಜಕಾರಣಿ"
ರಾಜ್ಯಾಧಿಕಾರಕ್ಕಾಗಿ ಗೆಲ್ಲುತ್ತಾನೆ "ಜನಮನ"
ಜಯಗಳಿಸಲು ಮಾಡುತ್ತಾನೆ "ನಮನ"
ಗೆದ್ದಮೇಲೆ ಅಭಿವೃದ್ಧಿಗೆ ಒಪ್ಪುವುದಿಲ್ಲ ಅವನ "ಮನ"
ಯಾರೇನೇ ಕೇಳಿದರೂ ಅವನ ಉತ್ತರ "ನ".....!!
೩.ಗೆದ್ದರೆ "ಟೀ ಪಾರ್ಟಿ"...
ಸೋತರೆ "ಆಂಟೀ ಪಾರ್ಟಿ"....!!
೪."ಮಾತು"
ತಪ್ಪಬಾರದು ಮಾತಿನ ಟ್ರ್ಯಾಕ್ಕು
ತಪ್ಪಿದರೆಆಗುವುದು ಮನಸ್ಸಿಗೆ ಕ್ರ್ಯಾಕ್ಕು..(ನೋವು)
ಇರಬೇಕು ನುಡಿಯಲ್ಲಿ,ನಡೆಯಲ್ಲಿ ಬ್ರೇಕು
ಬಾಯಿಗೆ ಸಿಕ್ಕದೇ ಬದುಕಬೇಕು...
೫."ಮದುವೆ"
ಬೇಕೆಂದು ಬಯಸುತ್ತಾರೆ ಮನದಲ್ಲಿ
ಯಾಕೆಂದು ಬೆಳೆಸುತ್ತಾರೆ ಮಾತಿನಲ್ಲಿ..!
ಆಗದಿರೆ ಇದ್ದಂತೆ ಕೋತಿ ವನದಲ್ಲಿ..
ಆಗುವಿರೆ..ಬಿದ್ದಂತೆ ಭೀತಿ ಮನೆಯಲ್ಲಿ...!!
೬."ರಸ್ತೆ"
ಕಾಸರಗೋಡು ಮಂಗಳೂರು ರೋಡು
ರೋಡಲ್ಲ ಮಳೆಗಾಲದ ತೋಡು...!
ಪಯಣಿಸಿ ಉಳಿದವಗೆ ಬೇಕು ಪಂಚಕರ್ಮ
ಸ್ವರ್ಗಕ್ಕೆ ತಲುಪಿದರೆ ಷಟ್ಕರ್ಮ...!!(ಬೊಜ್ಜ)
೭."ಮದುವೆ"
ಮದುವೆ ಬೇಡವಂತೆ ನಮ್ಮ ಗಂಡಿಗೆ
ಆದರೂ ತಾಳಿ,,! ಕಟ್ಟುವ "ಗುಂಡಿ"ಗೆ (ಗುಂಡ,ಗುಂಡಿ)
ಸಂಭಾಳಿಸಲು ಇರಬೇಕು ಗಟ್ಟಿ ಗುಂಡಿಗೆ
ತಾಳ್ಮೆ ಇದ್ದರೆ ಬೀಳಲಾರಿರಿ ಗುಂಡಿಗೆ..!!
೮."ನನ್ನ ಸಹನೆ"
ಬೇಸರಿಸದಿರಿ ಸುಮ್ಮನೆ ಮಾಡಿದಿರೆಂದು ಕಟಕಿ..
ಹಾರಿಹೋಯಿತೆಲ್ಲೋ..ಅದು... ನನ್ನ ಹೃದಯವೊಂದು ಕಿಟಕಿ..!
ನಷ್ಟವಿದ್ದರೂ ಸುಡುವುದಿಲ್ಲವೆ ಖುಷಿಗೆಂದು ಪಟಾಕಿ..
ಲಾಭವಿದ್ದರೆ ಮಾಡಿ(ಮಾಡಲಿ)ಬಿಡಿ ಈ ರೀತಿ ಚಟಾಕಿ....!!
೯."ಸೈನಿಕ"
ಕೃತಜ್ಞತೆ ಇರಲಿ ನಿಮ್ಮ ಜೀವನದಿ ದಾಟಿಸುವ ಅಂಬಿಗರಿಗೆ...
ಕೊಡುವುದಿಲ್ಲ ನಾವೇನು ಆ ಶೌರ್ಯ ಸಾಮರ್ಥ್ಯಗಳ ಬೀಗರಿಗೆ..!
ಹೊಟ್ಟೆಪಾಡಿಗಾಗಿ ತಮ್ಮ ಶೌರ್ಯ ಪದಕಗಳ ಇಡುವರು ಬಿಕರಿಗೆ...
ಕೇಳಿಕೊಳ್ಳಿ ಆತ್ಮಸಾಕ್ಷಿಯ ಇದು ಶೋಭೆಯೇ ಭಾರತ ಸಭಿಕರಿಗೆ...?!!
೧೦."ನಿತ್ಯ ಸುದ್ದಿ"
ಪರಿಣಾಮ ಬೀರದು ಅಜಗಳ ಜಗಳ
ಲೋಕ ಅಲ್ಲೋಲ ಕಲ್ಲೋಲ ಕೋಪಕ್ಕೆ ಗಜಗಳ
ನಿತ್ಯ ಕಲಹಕ್ಕೆ ಕೊನೆಯಿಲ್ಲ ಪ್ರಜೆಗಳ
ಸ್ಫೋಟ,ಕೊಲೆ ನಿತ್ಯವಾದರೆ ಅಗತ್ಯವೇ ರಜೆಗಳ?
೧೧."ಆಹಾರ"
ಒಮ್ಮೆ ಉಂಡವ ಯೋಗಿ.!
ಎರಡು ಬಾರಿ ಉಂಡವ ಭೋಗಿ..!!
ಮೂರು ಬಾರಿ ಉಂಡವ ರೋಗಿ..!!!
ನಾಲ್ಕು ಬಾರಿ ಉಂಡವನನ್ನು ಹೊತ್ಕೊಂಡ್ (ಚಿತೆಗೆ) ಹೋಗಿ...!!!!
೧೨."ಛಲ"
ಕಟ್ಟುವಿರೆ ನಾಡನ್ನು ಹೆಕ್ಕಿ ಈ ಜಗ..
ಕಟ್ಟುವುದು ಗೂಡನ್ನು ಹಕ್ಕಿ ಗೀಜಗ..!
ನಿಲ್ದಾಣ ಕ್ಷೇಮ ಸರಿ ವಿಮಾನಕ್ಕೆ..
ಹಾರದಿದ್ದರೆ ಕ್ಷೋಭೆಯಲ್ಲವೆ ಮಾನಕ್ಕೆ...!!
೧೩."ರಸ್ತೆ"
ಹಾಳಾಗಿ ಹೇಗಿದೆ..ನಮ್ಮ ರಸ್ತೆ..?
ಹೋಳಾಗಿ ಹೋಗಿದೆ ಇದು ದುರವಸ್ಥೆ...!
ಹೊಂಡದಲ್ಲಿ ಬಿದ್ದಾಗ ಸರಕಾರಿ ರಸ್ತೆ ಸಾರಿಗೆ..
ತುಂಡಾಗಿ ಬಿದ್ದಂತೆ ತರಕಾರಿ ಚಪ್ಪೆ ಸಾರಿಗೆ....!!
೧೪."ನನ್ನ ಅಭಿರುಚಿ"
ಗಣಕ ಯಂತ್ರ ಸಾಕು ಬುದ್ಧಿವಂತರ ಮಟ್ಟಿಗೆ
ಅಣಕದಂತಿದ್ದರೂ ಬೇಕು ಮೂರ್ಖರ ಪೆಟ್ಟಿಗೆ....!
ಆಡಲು ಚದುರಂಗ ಬುದ್ಧಿಯ ಕಟ್ ನಿಟ್ಟಿಗೆ
ನೋಡಲು ಚಂದ ತಿಳಿಗೇಡಿ ಕ್ರಿಕೆಟ್ ಒಟ್ಟಿಗೆ..!!
೧೫. "ತಿಳುವಳಿಕೆ"
ತಿಳಿದುಕೊಳ್ಳದಿರಿ ಲೋಕವ ಅರ್ಧಂಬರ್ಧ,
ಹಳಿದು ಕಳೆಯದಿರಿ ವಾಕ್ಯವ ಅಸಂಬದ್ಧ,
ಉಳಿದರೆ ಬೆಳೆಯುವಿರಿ ಜನಕೆ ಬದ್ಧ,
ಬೆಳೆದರೆ ಹೊಳೆಯುವಿರಿ ದಿನಕೆ ಪ್ರಬುದ್ಧ..!
೧೬."ಚುಟುಕ"
ಪರಿಸರಕ್ಕನುಸರಿಸಿ ಹೊಳೆವುದೊಮ್ಮೆ ಚುಟುಕ
ಕರಕರೆ ಮಾತಿಗೆ ಥಟ್ಟನೇ ಒಂದು ಮೊಟಕ..!
ಸರಿಯಾಗದೆಂದು ಅರಿತಾಗ ಕುಟುಕು..
ಪರಿಪೂರ್ಣ ಕೆಲಸಕ್ಕೆ ಜೀವಜಲ ಗುಟುಕು..
೧೭."ಜನ್ಮ ಭೂಮಿ"
ತಿನ್ನದೇ ಸಾಧ್ಯವೆ ತಾಯಿ ನಿನಗಿವರ ಜೀರ್ಣಿಸಲು..?
ನಿನ್ನ ಸಹನೆಯನು ನಾ ಸೋತೆ ವರ್ಣಿಸಲು..
ಜನ್ಮಭೂಮಿಯೆ ಕೊಡುಶಕ್ತಿ ಕೃತಘ್ನರ ನಾಶಕ್ಕೆ ಗುಣಿಸಲು...
ಪನ್ನಗದ ವಿಷ ಕಡಿಮೆಯಾಗುವುದೆ ಹಾಲುಣಿಸಲು..?
೧೮."ವ್ಯಕ್ತಿತ್ವ"
ದ್ವೇಷಾಗ್ನಿಗೆ ದೂಡಬೇಡ ಚಾಡಿಯ ಕಟ್ಟಿಗೆ..
ವಶಬೀಳುವೆ ಒಂದೊಮ್ಮೆ ನೀ ಇಕ್ಕಟ್ಟಿಗೆ..
ಕಟ್ಟು ಪರಸ್ಪರರಲ್ಲಿ ನಂಬಿಕೆಯ ಇಟ್ಟಿಗೆ..
ಒಟ್ಟು ತುಂಬುವುದು ನಿನ್ನ ಪುಣ್ಯದ ಪೆಟ್ಟಿಗೆ..
೧೯."ಕೋಪ-ತಾಪ"
ಹೆಚ್ಚಾಗಿ ತಾಪ   ಹೋಯಿತು ಸುಟ್ಟು   ಬೀರಿತು ಬೆಳಕು   ನಾರಿತು ಹೊಗೆ ಉಳಿಸಿತು ಬೂದಿ
ಹುಚ್ಚಾದ ಕೋಪ  ಆಯಿತು ಸಿಟ್ಟು  ಸೋರಿತು ಹುಳುಕು ಕಾರಿತು ಹಗೆ ಉಳಿಸಿತು ಬೇಗುದಿ..
೨೦."ಭಿನ್ನರುಚಿ"
ಅಮ್ಮ ಯಕ್ಷಗಾನಕ್ಕೆ ಬದ್ಧ
ನಮ್ಮ ಇಷ್ಟ ಸಿನೆಮಕ್ಕೆ ಶುದ್ಧ..!
ಸಾಕು, ಬೇಡವೆಂದು ಒಮ್ಮೊಮ್ಮೆ ವಿರುದ್ಧ..
ಬೇಕು ಬಿಡೆಯೆಂದು ಸುಮ್ಮನೇ ಯುದ್ಧ..!!

೧೦೦ ಫೇಸ್ ಬುಕ್ ಗಾದೆಗಳು..(ಸ್ವರಚಿತ..!)

ನಮಸ್ತೇ..
ಒಂದೆರಡು ವಾರಗಳ ಕಾಲ "ಫೇಸ್ ಬುಕ್ ಗಾದೆಗಳು ಎಂಬ ವಿನೂತನ ಶೈಲಿಯ ಬರಹವನ್ನು ಬರೆದೆ. ನಾನು ಇದನ್ನು ಪೂರ್ವ ಯೋಜಿತವಾಗಿ ಬರೆದದ್ದಲ್ಲ..ಸಂಗ್ರಹಿಸಿದ್ದೂ ಅಲ್ಲ..ಯಾವುದೋ ಕ್ಷಣದಲ್ಲಿ ಹೀಗೇ ಒಂದೆರಡು ಸಾಲು ಹೊಳೆಯುತ್ತಿತ್ತು..ಇದನ್ನು ಒಟ್ಟು ಸೇರಿಸಿ ಬರೆಯೋಣವೆಂದು ಹೊರ‍ಟಾಗ ಮತ್ತೆರಡುಸಾಲು..ಹಾಗೇ ೧೦-೧೫ ಬರೆದೆ..ಇದನ್ನು ಎರಡು ವಿಭಾಗವಾಗಿ ಬರೆಯೋಣವೆಂದು ಹೊರಟರೆ..ಮತ್ತೂ ಹೊಳೆಯಬೇಕೆ..!.ಹಾಗೇ ೫೦ ಮಾಡಿ ನಿಲ್ಲಿಸೋಣವೆಂದುಕೊಂಡಿದ್ದೆ.ಆಗ ನಟರಾಜ ಉಪಾಧ್ಯ ಅವರು ೧೦೦ ರ ವರೆಗೆ ಸಾಗಲಿ ಎಂದು ಹಾರೈಸಿದರು...ಹಾಗೇ ಆಯಿತು.ಸಾವಿರವಾಗಲಿ ಎಂದು ಹಾರೈಸಿದವರಿದ್ದಾರೆ..ಆದರೆ ಇನ್ನು ಬರೆಯಲು ಹೊರಟರೆ ಅದು ಅತಿಯಾಗುತ್ತದೆ.ಅಥವಾ ಅದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು.ಅಥವಾ ಪ್ರಯೋಜನವಿಲ್ಲದ ವ್ಯರ್ಥ ಕೈಚಳಕ..ಹಾಗಾಗಿ ಇಲ್ಲಿಗೇ ಕೊನೆ.ಮುಂದುವರಿಸುವುದಿದ್ದರೆ ಅವರಿಗೆ ನನ್ನ ಪ್ರೋತ್ಸಾಹ.ಇದಕ್ಕಾಗಿ ದಿನವಿಡೀ ತಲೆ ಕೆಡಿಸಿಕೊಳ್ಳಲಿಲ್ಲ.ದಿನಕ್ಕೆ ೧೫-೨೦ ನಿಮಿಷ ಉಪಯೋಗಿಸಿದ್ದರೆ ಹೆಚ್ಚು.ನಾನೇನೂ ಉತ್ತಮ ಬರಹಗಾರನಲ್ಲ..ತಿಳುವಳಿಕೆಯಂತೂ ದೂರವೇ ಉಳಿಯಿತು..
ಆದರೂ ಸ್ನೇಹಿತರ ಪ್ರೋತ್ಸಾಹ ಮುನ್ನುಗ್ಗಿಸಿತು.ನೀವು ತಪ್ಪು ಭಾವಿಸುವುದಿಲ್ಲವಾದರೆ ೧೦೦ ಗಾದೆಗಳನ್ನು ರಚಿಸಿದ್ದು ನನ್ನ ಲೇಖನಿಯ ಸಣ್ಣ ಯಶಸ್ಸೆಂದು ಭಾವಿಸುತ್ತೇನೆ..ಇದು ನನಗೆ ಅನೇಕ ಸದಭಿರುಚಿಯ ಗೆಳೆಯರನ್ನು ಗಳಿಸಿಕೊಟ್ಟಿದೆ.ಹೆಚ್ಚಾಗಿ ಫೇಸ್ ಬುಕ್ಕಿನ ಪ್ರಸ್ತುತ ಬೆಳವಣಿಗೆಗಳ ಕುರಿತೇ ನನ್ನ ಬರವಣಿಗೆ.ಯಾವುದೂ ಯಾರ ಕುರಿತೂ ವೈಯಕ್ತಿಕವಾಗಿ ಬರೆದದ್ದಲ್ಲ.ಕಮೆಂಟ್ ಮಾಡುವವರು ವಾದ ಮಾಡುತ್ತಾರೆಂದಲ್ಲ..ಚಾಟ್ ಮಾಡುವವರೆಲ್ಲಾ ಲವ್ ಮಾಡುತ್ತಾರೆಂದೂ ಅಲ್ಲ..ಹಾಸ್ಯದ ದೃಷ್ಟಿಯಿಂದ ಬರೆದೆ.ಕೆಲವರು ಒಂದು ಲೈಕಾಗಲೀ ಕಮೆಂಟ್ ಆಗಲೀ ಹಾಕದೇ ಪೋಸ್ಟ್ ಮಾತ್ರ ಹಾಕುತ್ತಾರೆ ಅದು ತಪ್ಪೆಂದು ನನ್ನ ಭಾವನೆ..ಇನ್ನು ಕೆಲವರು ಸಿಕ್ಕಿದಲ್ಲಿಂದ ಕಾಪಿ ಹೊಡೆದು ನಿಮಿಷಕ್ಕೆರಡು ಪೋಸ್ಟ್ ಹಾಕುತ್ತಾರೆ..ಕಷ್ಟಪಟ್ಟು ಟೈಪಿಸಿ ಬರೆದ ಪೋಸ್ಟ್ ಎಲ್ಲೋ ಹುದುಗಿ ಹೋಗುತ್ತದೆ..(ಯಾವಾಗಲೂ ಅಲ್ಲ).ಹಾಗಾಗಿ ಅವುಗಳ ಬಗ್ಗೆ ಒಂದಿಷ್ಟು(೭,೧೩,೨೪,೨೫,೩೪,೩೭,೪೩,) ಗಾ(ವಾ)ದಿಸಿದ್ದೇನೆ..
ಕೊನೆಯದಾಗಿ ಮೆಚ್ಚಿ ಪ್ರೋತ್ಸಾಹಿಸಿದ ನಿಮಗೆಲ್ಲರಿಗೆ ಧನ್ಯವಾದ..ನನ್ನೊಂದಿಗೆ ಕಮೆಂಟಲ್ಲಿ ಕೆಲವು ಗಾದೆ ರಚಿಸಿದ(ಮೇಲಿನ ನೂರಲ್ಲ..!) ಸ್ನೇಹಿತರಿಗೆ ವಿಶೇಷ ನೆನಕೆ.ಅದರಲ್ಲಿ ನನಗೆ ಇಷ್ಟವಾದದ್ದು "ಹೋದೆಯಾ ಆರ್ಕುಟಲ್ಲಿ ಎಂದರೆ ಬಂದೆಯಾ ಫೇಸ್ ಬುಕ್ಕಲ್ಲಿ..!!" ಕಮೆಂಟಿಸಿದವರ ಹೆಸರು ನೆನಪಿಲ್ಲ.. ಕ್ಷಮೆಯಿರಲಿ..ಚುಟುಕ ಎಂದಿನಂತೆ ಮುಂದುವರಿಯಲಿದೆ ಇಷ್ಟವಾದರೆ ಓದಿಕೊಳ್ಳಿ..ವಂದೇ..
೧.ನೆಟ್ಟಗೇ ಬ್ಯಾಂಕ್ ಅಕೌಂಟ್ ಮಾಡಲಾಗದವ,,ನೆಟ್ಟಿನಲ್ಲಿ ಫೇಸ್ ಬುಕ್ ಅಕೌಂಟ್ ಮಾಡಿದ..!
೨.ಫೇಸ್ ನೋಡದವ ಫೇಸ್ ಬುಕ್ ನೋಡಿಯಾನೇ..?!
೩.ಚಾಟ್ ಮಾಡಲು ಬಂದವಳು ಮೀಟ್ ಮಾಡಲು ಬರದಿರುತ್ತಾಳೆಯೇ..?!
೪.ಸಿಮೆಂಟ್ ಕಟ್ಟಲು ವರುಷ ಕಮೆಂಟ್ ಕುಟ್ಟಲು ನಿಮಿಷ..!
೫.ಕಮೆಂಟ್ ಹಾಕಲು ಬಾರದವ ಪೋಸ್ಟ್ ಸರಿಇಲ್ಲ ಎಂದಂತೆ..
೬.ಊರಿಗೆ ಟ್ರೆಂಡಾದರೂ ಫೇಸ್ ಬುಕ್ ನಲ್ಲಿ ಫ್ರೆಂಡೇ..
೭."ಲೈಕಮೆಂಟ್"(ಲೈಕ್+ ಕಮೆಂಟ್) ಒತ್ತದವ ಪೋಸ್ಟ್ ಬಿತ್ತಿದ..!
೮.ಬುಕ್ಕಿಗೆ ಫೇಸ್ ಕೊಡದಿದ್ದರೂ ಫೇಸ್ ಬುಕ್ಕಿಗೆ ತಲೆ ಕೊಟ್ಟ..!
೯.ಟೇಸ್ಟಿನಂತೆ ಪೋಸ್ಟ್..ಕಮೆಂಟಿನಂತೆ ಲೈಕ್..
೧೦.ಪೋಸ್ಟ್ ಹಾಕಿದವನಿಗೆ ಲೈಕ್ ಮುದ್ದು..
೧೧.ಚಾಟ್ ನಂಟಿಗೆಳೆದರೆ ಪೋಸ್ಟ್ ವಾದಕ್ಕೆಳೆಯಿತು..!
೧೨.ಕಂಪ್ಯೂಟರ್ ಗೆ ವೈರಸ್ ಬಂದರೆ ಫೇಸ್ ಬುಕ್ಕಿಗೆ ಬರೆ..!
೧೩.ಫೋಟೋ ಕದ್ದ ಎಂದರೆ ವೆಬ್ ಕ್ಯಾಮ್ ಮುಟ್ಟಿ ನೋಡಿದ..!
೧೪.ಕಮೆಂಟಲ್ಲಿ ಬೆಳೆಯುವ ವಾದ ಪೋಸ್ಟಿನಲ್ಲಿ..
೧೫.ಗೆಂಟು ಕಮೆಂಟಿನ ಜಗಳ ಕರೆಂಟು ಮುಗಿಯುವ ತನಕ..!
೧೬.ಪಕ್ಕಾ ಚಿತ್ರ ತೋರಿಸಿದ್ರೂ ಫೇಕ್ ಚಿತ್ರ ಎಂದ..!
೧೭.ಹೆಂಗಸರ ಬುದ್ಧಿ ಲೈಕಿನ ಕೆಳಗೆ,ಗಂಡಸರ ಬುದ್ಧಿ ಸ್ಟ್ರೈಕಿನ ವರೆಗೆ..!
೧೮.ಓದಲಿಕ್ಕುಂಟು ಲೈಕಿಗಿಲ್ಲ..!
೧೯.ಬರಬರುತ್ತಾ ಸೂಪರ್ ಪೋಸ್ಟ್ ಪಾಪರ್ ಆಯ್ತು..!
೨೦.ಮನೆಗೆ ಸೋಮಾರಿ ಫೇಸ್ ಬುಕ್ಕಲ್ಲಿ ಸಲಹೆ ತರಾವರಿ..!
೨೧.ಕುಳಿತು ಜಾಲಾಡುವವಗೆ ಕೊಡುಗೆ ಜಿ.ಬಿ ಸಾಲದು...!
೨೨.ಕಮೆಂಟನ್ನು ನಂಬಿದರೂ ಕರೆಂಟನ್ನು ನಂಬಬಾರದು..!
೨೩.ಕಂಡವರ ಪೋಸ್ಟಲ್ಲಿ ಕಮೆಂಟು ಹಾಕಿ ಲೈಕ್ ಪಡಕೊಂಡವನೇ ಜಾಣ..
೨೪.ಆರ್ಟ್ ಕದ್ದರೂ ಕಳ್ಳ..ಆರ್ಟಿಕಲ್ ಕದ್ದರೂ ಕಳ್ಳ..!
೨೫.ಪೋಸ್ಟ್ ಮಾಡುವುದು ಪೇಸ್ಟ್ ಮಾಡಿದಂತಲ್ಲ..
೨೬.ಶೇರ್ ಮಾಡಿದರೂ ಕೇರ್ ಮಾಡದಂತೆ..
೨೭.ಪೋಸ್ಟಿನಲ್ಲಿ ಹೋದ ಮಾನ ಲೈಕಿನಲ್ಲಿ ಸಿಗದು..!
೨೮.ಚಿಂತೆಯಿಲ್ಲದವಗೆ ಆಫೀಸ್ ವರ್ಕಲ್ಲೂ ಫೇಸ್ ಬುಕ್..!
೨೯.ಮಗನಿಗೆ ಫೇಸ್ ಬುಕ್ ಆಟ..ಅಪ್ಪನಿಗೆ ಹಣದ ಸಂಕಟ..!
೩೦.ಮೆನ್ ಷನ್ ಮಾಡಿದಲ್ಲಿ..ಟೆನ್ ಷನ್ ಆಯ್ತು ಎಂದ..!
೩೧.ಲೈಕ್ ಒತ್ತಿ ಶುರುವಾದ್ದು..ಬೈಕ್ ಹತ್ತಿ ಕೊನೆಯಾಯ್ತು..!
೩೨.ಲಾಕರ್ ಒಡೆದ ಫೈಲ್,..ಹ್ಯಾಕರ್ ನೋಡಿದ ಪ್ರೊಫೈಲ್..ಎರಡೂ ಒಂದೇ..
೩೩.ಗ್ರೂಪ್ ನೂರಾರು..ಲೂಪ್ ಸಾವಿರಾರು..
೩೪.ಪೋಸ್ಟ್ ಹಾಕಿದ ಮಾತ್ರಕ್ಕೆ ಪೋಸ್ಟ್ ಮ್ಯಾನ್ ಅಲ್ಲ..ಲಿಂಕ್ ಹಾಕಿದ ಮಾತ್ರಕ್ಕೆ ಲಿಂಕನ್ನನಲ್ಲ
೩೫.ಐ.ಡಿ ಯಾವುದಯ್ಯಾ ಎಂದರೆ ಪಾಸ್ ವರ್ಡ್ ಹೇಳಿದ..!
೩೬.ಕಮೆಂಟು ತಾನೂ ಕೆಡುವುದಲ್ಲದೆ ಪೋಸ್ಟನ್ನೆಲ್ಲಾ ಕೆಡಿಸಿತು..!
೩೭.ಪೋಸ್ಟ್ ಹಾಕಿದವನೇನು ಹೆಚ್ಚಲ್ಲ..ಲೈಕ್ ಒತ್ತಿದವನೇನು ಕಡಿಮೆಯಲ್ಲ..
೩೮.ಕಪಿಲ್ ಸಿಬಲ್ ತೆಗಳಿದರೆ ಫೇಸ್ ಬುಕ್ ಹಾಳಾಗುತ್ತದೆಯೇ..?!!
೩೯.ಪ್ರೊಫೈಲ್ ನೋಡಿ ಕನ್ ಫರ್ಮ್ ಕೊಡು..
೪೦.ಫೇಸ್ ಬುಕ್ಕಲ್ಲಿ ಚರ್ಚೆಯಮೇಲೆ ಗೆದ್ದೆ..ಆಫೀಸ್ ಲುಕ್ಕಲ್ಲಿ ಕುರ್ಚಿಯ ಮೇಲೆ ನಿದ್ದೆ..!
೪೧.ಫೇಸ್ ನಂತೆ ವ್ಯಕ್ತಿಯಿಲ್ಲ,ಫೇಸ್ ಬುಕ್ ನಂತೆ ವ್ಯಕ್ತಿತ್ವವಲ್ಲ..
೪೨.ಕಮೆಂಟ್ ಮನ ಕೆಡಿಸಿತು,ಸಿಮೆಂಟ್ ಮನೆ ಕೆಡಿಸಿತು..!
೪೩.ಮೇಲೆ ಬರೆದ ಪೋಸ್ಟ್ ಕೆಳಗಿಳಿಯಲೇ ಬೇಕು..
೪೪.ಹೊಸ ಗ್ರೂಪಿಗಿಂತ ಹಳೇ ವಾಲೇ ಮೇಲು..
೪೫.ಮೇಲೆ ನೋಡಿ ಉಗುಳಿದ್ದು ಫೇಸ್ ಗೆ ಬಿತ್ತು..ಮೈಲ್ ನೋಡಿ ತೆಗಳಿದ್ದು ಫೇಸ್ ಬುಕ್ಕಲ್ಲಿಬಿತ್ತು..!!
೪೬.ಫೇಸ್ ಬುಕ್ ಮೇಲೆ ಪ್ರೀತಿ,ಕರೆಂಟ್ ಮೇಲೆ ಆಸೆ..!
೪೭.ಕಮೆಂಟ್ ಬೆಳ್ಳಿ,ಲೈಕ್ ಬಂಗಾರ..!
೪೮.ಕರೆಂಟು ಹೋದಲ್ಲಿ ಬ್ಯಾಟ್ರಿಯೂ ವೀಕು..!
೪೯.ಸ್ವಲ್ಪ-ಮಿಗೆ ಸೌಕರ್ಯ ಕೊಡುಗೆ, ಅರ್ಧರಾತ್ರಿಯಲ್ಲಿ ಮೌಸ್ ಹಿಡಿದ..!!
೫೦.ಪೋಸ್ಟ್ ಮೆಚ್ಚಿದರೇನುಬಂತು..ಲೈಕ್ ಹಚ್ಚದಿದ್ದರೆ...?!
೫೧.ವಾಲೂರಲಿ(wall)ತಿಳಿದವನೇ ಫ್ರೆಂಡು.
೫೨.ಚಾಟಲ್ಲಿ ಮೆಚ್ಚಿಸಿದ..ಕಮೆಂಟಲ್ಲಿ ಕಚ್ಚಿಸಿದ...!
೫೩.ಕಮೆಂಟಲ್ಲಿ ವಿಶೇಷ ಹೊಗಳಿದ..ಮೆಂಟಲಲ್ಲಿ ದ್ವೇಷ ಉಗುಳಿದ..!!
೫೪.ಅವನು ಬಯಸಿದ್ದು ಚಾಟು ಲೈಕು..ನೆಟ್ಟು ಕೊಟ್ಟದ್ದು..ಸ್ವೀಟುವೈಫು..!!
೫೫.ಚಿಕ್ಕದರಲ್ಲಿ ಚಾಕ್ಲೇಟುಕೊಟ್ಟ ಸುಖ.,ದೊಡ್ಡವನಾದ ಮೇಲೆ ಚಾಟ್ಲೈಕು..ಕೊಟ್ಟಿತು..!
೫೬.ಕಪಿಲ್ ಸಿಬಲ್ ಮಂತ್ರಕ್ಕೆ ಫೇಸ್ ಬುಕ್ ಉದುರದು..!
೫೭.ಒಟ್ಟೇನೆಂದರೂ ಬಿಡದೀ ಫೇಸ್ ಬುಕ್..!
೫೮.ನೆಲಕ್ಕೆ ಪೋಸ್ಟ್-ಕರೆಂಟ್-ಲೈಟ್ ಬಂದರೂ...ಜಾಲಕ್ಕೆ ಪೋಸ್ಟ್-ಕಮೆಂಟ್-ಲೈಕ್ ಬರಲಿಲ್ಲ..!!
೫೯.ಲೈಕ್ ಒತ್ತಿದ ಮಾತ್ರಕ್ಕೆ ಲಾಯಕ್ಕಲ್ಲ..ಕಮೆಂಟ್ ಒತ್ತಿದವರೆಲ್ಲಾ ನೆಂಟರಲ್ಲ..
೬೦.ಫೇಸ್ ಬುಕ್ ಬಂದಾಗ ಆಫೀಸ್ ವರ್ಕ್ ಮರೆಯಬೇಡ..!
೬೧.ಫ್ರೆಂಡ್ ವಾಲ್ ಮೇಲೆ ಲೈಕ್ ಹಚ್ಚಿದಂತೆ..!
೬೨.ಒತ್ತಿದ ಲೈಕು ಮುದ್ದಲ್ಲ..!!
೬೩.ಫೈಲಲ್ಲಿರುವುದೆಲ್ಲಾ ಸತ್ಯವಲ್ಲ..ಪ್ರೊಫೈಲಲ್ಲಿರುವುದೆಲ್ಲಾ ಮಿಥ್ಯವಲ್ಲ...
೬೪.ಚಾಟ್ ಮಾಡಿ ಆಯ್ತಾ ಎಂದರೆ ಫ್ರೆಂಡ್ ಶಿಪ್ ೩೩೦ ರಒಳಗೇ ಎಂದ..!!
೬೫.ಕಣ್ಣಾರೆ ಕಂಡರೂ ಫೇಸ್ ಬುಕ್ಕಿನೊಳಗೆ ಇಣುಕಿ ನೋಡು..!
೬೬.ಲೈಕ್ ಹಚ್ಚಿದ ಮಾತ್ರಕ್ಕೆ ಒಳಿತಾಗದು..ಲೈಟ್ ಹೆಚ್ಚಿದ ಮಾತ್ರಕ್ಕೆ ಬೆಳಕಾಗದು..
೬೭.ನೆಟ್ಟಿನಲಿ ಕೋರೈಸಿದರೇನು ಬಂತು..ಹುಟ್ಟಿದವಗೆ ಹಾರೈಸದಿದ್ದರೆ..?
೬೮.ಬುಕ್ಕಿನೊಳಗೆ ಮೊಬೈಲ್ ಮುಚ್ಚಿ ನೆಟ್ಟು ಜಾಲಾಡಿದಂತೆ..!!
೬೯.ಪೋಸ್ಟ್ ಕಾಲೇ ಟೈಪಾಭ್ಯಾಸಃ..!!
೭೦.ಬಿಟ್ಟಿಗೆ ನೆಟ್ಟಿಲ್ಲದಿದ್ದರೂ ಒಟ್ಟಿಗೆ "ಫೀ" ಮೇಲಿಗೆ.!!
೭೧ಗಂಟಲ್ಲಿ ಉಳುಕಿದ್ದರೆ "ಮೂವ್" ಹಚ್ಚು..ಕಮೆಂಟಲ್ಲಿ ಹುಳುಕಿದ್ದರೆ "ರಿಮೂವ್" ಹಚ್ಚು..!!!
೭೨.ಕಿರಿಕಿರಿ ಅತಿಯಾದ್ರೆ ಬ್ಲಾಕ್ ಮಾಡು..ಪರಿಚಯ ಮಿತಿಯಲ್ಲಿ ಜೋಕ್ ಮಾಡು....!
೭೩.ಫೇಸ್ ವಾಶ್ ಮಾಡಿದರೆ ಮನದ ಕಷ್ಟ ಮಾಸದು..ಫೇಸ್ ಬುಕ್ ನೋಡಿದರೆ ಮನೆಯ ಕಷ್ಟ ಮುಗಿಯದು..
೭೪.ದಿವಸ ಎದ್ದ..ಜಾಲ ಬೀಸಿದ..!!
೭೫.ಫೇಸ್ ಬುಕ್ ಬಿಡಲೂ ಬಾರದು..ಆರ್ ಕುಟ್ ಸಾಯಲೂ ಬಾರದು..
೭೬.ಕಮೆಂಟಿಸಿದ್ದು ಪರರಿಗೆ.. ಲೈಕ್ ಸಿಕ್ಕಿದ್ದು ತನಗೆ..!
೭೭.ಚಾಟಿಗಿಂತ ರುಚಿಯಿಲ್ಲ..ಫ್ರೆಂಡಿಗಿಂತ ಬಂಧುವಿಲ್ಲ..
೭೮.ಪೋಸ್ಟ್ ಹಾಕುತ್ತಾ ಸ್ನೇಹಿತರು..ಕಮೆಂಟ್ ಬೆಳೆಯುತ್ತಾ ವಾದಿ-ಪ್ರತಿವಾದಿಗಳು..
೭೯.ಕದ್ದು ಮುಚ್ಚಿ ಚಾಟ್ ಮಾಡಿದರೂ..ಕಣ್ಣುಮುಚ್ಚಿ ಮೀಟ್ ಮಾಡಲಾಗದು..!
೮೦.ಕವಿತೆ ಹೊಳೆದಾಗ ನೆಟ್ ತೆರೆದು ಪೋಸ್ಟ್ ಮಾಡು..
೮೧.ಲೈಕಮೆಂಟ್ ಹಾಕಬಲ್ಲವನು ಪೋಸ್ಟ್ ಹಾಕಿ ಬಾಳುವ..
೮೨.ವಾಲಿಗೆ ಬಂದದ್ದು ಪಾಲಿಗೆ ಬರದೇ ಹೋಯಿತು..
೮೩.ಬೆಳ್ಳಗಿರುವುದೆಲ್ಲಾ ವಾಲಲ್ಲ..!!
೮೪.ನೆಟ್ಟುಗುಣ ಕೆಟ್ಟರೂ ಬಿಡದು..!!
೮೫.ಮಿತಿಯ ಫೇಸ್ ಬುಕ್ ಅಂಗೈಯಲ್ಲಿನ ನೆಲ್ಲಿಕಾಯಿ..ಅತಿಯಾದ್ರೆ ಅಂಗೈಯಲ್ಲಿನ ಹುಣ್ಣು..!
೮೬.ಅಕೌಂಟ್ ಹುಟ್ಟುವ ಮೊದಲೇ ಪೋಸ್ಟ್ ಟೈಪಿಸಿಕೊಂಡಂತೆ..
೮೭.ಲೈಕೆಣ್ಣೆ ಹಾಕದೆ ಪೋಸ್ಟ್ ಚಲಿಸದು..ಕಮೆಂಟ್ ಗೇರ್ ಇದ್ದರೆ ವೇಸ್ಟ್ ಎನಿಸದು..!
೮೮.ಫೇಸ್ ಬುಕ್ ಅಕೌಂಟ್ ಮಾಡಿ ನೋಡು..ಕವಿತೆ ಕಟ್ಟಿ ನೋಡು.
೮೯.ಬಲೆಯಲ್ಲಿ ಬಿದ್ದ ಮೀನಿನ ಜೀವ..ಜಾಲದಲ್ಲಿ ಬಿದ್ದ ನಿನ್ನ ಜೀವನ..ಎರಡೂ ನಷ್ಟ..!
೯೦.ಸುಂದರ ಪೋಸ್ಟ್ ಮೆಚ್ಚದವ..ಸುಂದರಿಯರ ಪೋಸ್ಟ್ ಗೆ ಲೈಕಮೆಂಟ್ ಹಚ್ಚಿದ..!
೯೧.ಕಾದರೆ ಲೈನ್ ಪೋಸ್ಟ್ ಆಯಿತು..ಕಾದಿದರೆ ಟೈಮ್ ವೇಸ್ಟ್ ಆಯಿತು..
೯೨.ಬಿದ್ದು ಹೋಗೋ ಕಮೆಂಟು ಗುದ್ದಿ ಹೋಯಿತು..!!
೯೩.ವಾಲೊಳಗಿನ ತಿಪ್ಪೆಯಾಗಬೇಡ..ಸವಾಲೊಳಗೆ ಸಂವಾದ ನೋಡು..
೯೪.ಅಕೌಂಟೇ ಹ್ಯಾಕ್ ಆದ ಮೇಲೆ ಪಾಸ್ ವರ್ಡ್ ಬದಲಿಸಹೊರಟ..!!
೯೫.ಪಾಪಿ ಹೋದಲ್ಲಿ ಮಿಲಿಮೀಟರುದ್ದ ರೇಂಜು..!
೯೬.ಮೈಲ್,ಪ್ರೊಫೈಲ್ ವ್ಯಕ್ತಿ ಪರಿಚಯ ಮಾಡಿದರೆ..ನೋಟ್ಸ್,ಫ್ರೆಂಡ್ಸ್ ವ್ಯಕ್ತಿತ್ವ ತಿಳಿಸಿತು..
೯೭.ಕ್ಷಣ ಬಳಸಿ ಕಲಿಕೆಗೆ ಬುಕ್ ಚೆನ್ನ..ಹಣ ಬಳಸಿ ತಿಳಿವಿಗೆ ಫೇಸ್ ಬುಕ್ ಚೆನ್ನ..
೯೮.ನ್ಯೂಸ್ ಬುಕ್ ನಿದ್ದೆಗಿಳಿದರೆ..ಫೇಸ್ ಬುಕ್ ಬುದ್ಧಿ ಕಲಿಸಿತು..!!
೯೯.ಒಂದೋ ಪೋಸ್ಟ್ ಬಹಳ.ಇಲ್ಲಾ ಲೈಕೂ ವಿರಳ..
೧೦೦.ಗಾದೆಯೆಲ್ಲ ಮುಗಿದ ಮೇಲೆ ಫೇಸ್ ಗೂ ಬುಕ್ಕಿಗೂ ಏನು ಸಂಬಂಧ ಎಂದಂತೆ..!!!