Wednesday 25 January 2012

ನದಿ-ಜಲಧಿ


ನೀರೇ ನೀರಮಣಿಯೆ?
ನೀರವತೆಯ ಸಾಗರ ಸರಣಿಯೇ..?

ದಾಹ ನೀಗಲು ಕುಡಿಯೆ ಅದು ಬರಿಯ ಉಪ್ಪೇ..
ಮೋಹವಿಲ್ಲದೆ ತಡಿಯ ಅರಿಯದೆ ಸರಿಯ ಮುಪ್ಪೇ...
ಆಳ ನೋಡದೆ ತೇಲಿಹೋಗುವ ಭೀತಿ ಕಪ್ಪೇ..
ಗಾಳ ಹೂಡದೆ ಬಲಿಗೆ ನೀಗುವ ನೀತಿ ಒಪ್ಪೇ..

ನೀಮಮತೆಯ ಸಮುದ್ರದ ಸೆರಗಾಗಬೇಡ..
ಸುಮಲತೆಯ ಚೆಲ್ಲುವ ಮುಂಗುರುಳ ಸ್ವರವಾಗು..
ಪುಟ್ಟ ಹೂಗಿಡಗಳ ಪಾಲಿನ ನದಿಯಾಗು
ಸುಟ್ಟ ನನ್ನೆದೆಗೆ ಹಾಲಿನ ಹದಿಯಾಗು

ಬಿಳುಚಿದ ದುಂಡು ಸಾಗರಕಿಂತ
ಬಳುಕಿದ ಸಣ್ಣ ನಡುವಿನ ನದಿ ಚಂದ
ಸಮುದ್ರವದು ಚೋದನೀಯ ಉದಯಾಸ್ತಕೇ
ಸಮೃದ್ಧವಿದು ಚೇತನಕೆ ಆಪಾದಮಸ್ತಕೇ

ಜಲ ನೀನು ಬೆಳೆಯುತಿಹ ನೀರಲತೆ...
ಜಲಧಿ ನೀ ಬಿಳಿಚುತಿಹ ನೀರವತೆ....
ತೊರೆ ಬೆಳೆದು ಕುಡಿನೋಟದಾ ತರುಣಿಯು...
ತೊರೆದೆಳೆದು ಸುಡುಬಿಂಬದಾ ತರಣಿಯು...

ಹಾಡಾಗಿ ಹರಿಯುತಿರೆ ಜೀವಜಲ
ಮಲಯ ಮಾರುತ ಸೋಲದೇ..?
ನೋಡಾನೀ ಸಿರಿಯತೆರೆ ಸಿಹಿಯದೆಲ್ಲ
 ಮೇಘ ಮಲ್ಹಾರವಾಗದೇ..?

Friday 20 January 2012

ಸಮಸ್ಯೆಗಳು...

೧.ಇದು ಸ್ವರಚಿತ ವಾಕ್ಯ.ಇದರಲ್ಲಿ ಒಂದು ಸೂತ್ರ ಅಡಗಿದೆ.. ಅದೇನು..?
ಹೇಳುವವರು ಒಳ್ಳೆಯದಕ್ಕಾಗಿ ಹೇಳುವುದನ್ನು ಚೆನ್ನಾಗಿ ಹೇಳುವುದರಿಂದ  ಮನಸ್ಸಿಗೆ ಹಿತವಾಗಿ ಹೇಳುವುದಕ್ಕೆ  ಕಿವಿಯಲ್ಲಿ ಮೆಲ್ಲಗೇ ಹೇಳುವವರ ದೆಸೆಯಿಂದ ನಮಗೊಂದು ನೆಮ್ಮದಿ ಸಿಕ್ಕಿತು ಎಂದು ಹೇಳುವವರ ಕಂಡಾಗ  ಬುದ್ಧಿ ಹೇಳುವವರಲ್ಲಿ  ಹೃದಯ ತುಂಬಿ ನಾವು ಹೇಳುವುದೇನು..? ಒಮ್ಮೆ ಹೇಳಿರೀ..!!

Tuesday 17 January 2012

ಪ್ರೀತಿ..


ಮಧುರವೆನ್ನುವರು ಪ್ರೀತಿ..
ಸುಂದರವೆನ್ನುವರೊಂದು ರೀತಿ..
ಮಾತನಾಡಲು ಮಾತ್ರ ಬಿಡದು ಭೀತಿ..

ಜೀವಿಸಲು ಬೇಕು..
ಭಾವನೆಗಳ ಶ್ವಾಸ...
ಆಗುವೆಯ ನನ್ನ ಪ್ರಾಣವಾಯು...?

ಸೇವಿಸಲು ಸಾಕು..
ನಿನ್ನ ವಿಶ್ವಾಸ....
ನೀಗುವೆಯ ಮುನ್ನ ಪ್ರಣಯ ಸಾವು...?

ತಡೆದು ನಿಲ್ಲಲೆ..?
ಭಾವನೆಗಳ ಅಣೆಕಟ್ಟು
ತನು ಭಾರವಾಗಿದೆ...

ಒಡೆದು ಚೆಲ್ಲಲೆ..?
ವೇದನೆಗೆ ಕಂಗೆಟ್ಟು..
ಮನ ಹಗುರವಾಗದೇ...?

ಹೇಳುವರು ನೀತಿ..ಪ್ರೇಮ
ಬರಿಯ ಬಂಧನವೆಂದು
ಅದು ಅವರ ವೈರಾಗ್ಯ..

ತಾಳುವೆನು ಪ್ರೀತಿ..ಸೌಮ್ಯ
ಸಿರಿಯ ಇಂಧನವೆಂದು
ಇದು ಅಮರ ಸೌಭಾಗ್ಯ..!

ಕಾನನ..


ಲಕ್ಷ ಲಕ್ಷ್ಯಗಳ ಮೇಳೈಸಿ | ನಳ
ನಳಿಸುವ ಕವಿತೆಯ ಸುಲಲಿತವಾಗಿ|
ಲಿಖಿಸಲು ಕವಿ ಸವಿ ಸುವ್ವಿಗಳ ಕುಲುಕಿಸಿ
ಲಕ್ಷ್ಮೀಶನ ಒಲಿಸಲಾಲಾಪಿಸಿದ..||

ಹಸಿರಿನ ಉಸಿರನು ಬಸಿಯುವ ಬಿಸಿಲಿಗೆ
ಅಳಿಯುತ್ತಿದ್ದ ಲತೆಗಳ ಉಳಿಸಲು ಇಳಿಯುತ್ತ|
ಏಳುತ್ತ ಬೀಳುತ್ತ ಹಳ್ಳಕ್ಕೆ ಅಳುಕುತ್ತ
ಆಳದ ಸುಳಿಯ ತಿಳಿಯುತ್ತಿತ್ತು ಜಲವು||

ನವಿಲಿನ ಮನಕೆ ರೆಕ್ಕೆಯ ಜನುಮ
ಕಾನನದಿ ತಾನನ ತಕದಿಮಿ ಕಿಟದಿನ|
ಕೋವಿದ ನವಿಲಿನ ನರ್ತನ ಕೀರ್ತನ
ಗಿಳಿಗಳ ಹಕ್ಕಿಗಳ ಚಿಲಿಪಿಲಿ ಸವಿ ಉಲಿ||

ಹುಲಿಗಳ ಬಾಳಲ್ಲಿ ಬೆಳಕಿದೆ ಕೊಳಕಿಲ್ಲ
ಬಿಲ್ಲು ಗುಲ್ಲು ಗಲ್ಲು ಕೊಲ್ಲು ಇಲ್ಲವೇ ಇಲ್ಲ|
ಲತೆಗಳ ತರುಗಳ ಜೀವಾಳ ಬೇವು ಬೆಲ್ಲ
ಒಳಗಿನ ಬೆಳಕಲ್ಲಿ ಇರುಳಿನ ಅಳುಕಿಲ್ಲ||

ಅಳಿಲಿನ ಅಳಲಿಲ್ಲಿ ಕೇಳಲು ಸಿಗದಲ್ಲ
ಎಲ್ಲ ಸಲ್ಲುವರು ಇಲ್ಲಿ ಅಳಿವೆಂದೂ ಇಲ್ಲ ||

ಸಲ್ಲಲಿತ ಸುಲಲಿತ ಮಾತುಗಳ ಮಲ್ಲ
ಎಲ್ಲ ಬಲ್ಲ ದನದ ಗೊಲ್ಲ ಇಲ್ಲಿಯ ಮಲ್ಲ||
ಬಾಳಲ್ಲಿ ದಯೆಯ ಬೆಲೆ ತಿಳಿಯಿತಲ್ಲ||

"ಸ್ವ"ಭಾವ..೧

( ಸ್ವಂತ,ಸ್ವತಂತ್ರ,ಸ್ವಸ್ತಿ,ಸ್ವಲ್ಪ,ಸ್ವರ,ಸ್ವಯಂ,ಸ್ವದಿತ,ಸ್ವಪ್ನ,ಸ್ವರಸ,ಸ್ವರೂಪ, ಸ್ವಸ್ಥ,ಸ್ವಾದ,ಸ್ವಾಸ್ಥ್ಯ... ..ಭಾವಗಳ ವಿವಿಧ ಮಜಲುಗಳ ಸರಣಿಯೇ "ಸ್ವ"ಭಾವ....)
ಪ್ರೀತಿಯನ್ನು ಅಮರ ಎನ್ನುತ್ತಾರೆ..
 ಈಗಿನ ನಮ್ಮ ಪೀಳಿಗೆಯ ಯುವಕ ಯುವತಿಯರಲ್ಲಿ ಪ್ರೀತಿಯ ಬಲೆಯಲ್ಲಿ ಬೀಳದವರು ಬಹಳ ಕಡಿಮೆ..ಇನ್ನು ಪ್ರೀತಿಯಬಗ್ಗೆ ಇರುವ ಕಥೆಗಳೂ ಸಿನೆಮಾಗಳಿಗಂತೂ ಇತಿಮಿತಿಯಿಲ್ಲ..ಪ್ರೀತಿ ಅಷ್ಟೊಂದು ಪ್ರಭಾವಿ.ಅದಕ್ಕೆ ಅಮ್ಮನ ಮಮತೆಯನ್ನೂ ಸೋಲಿಸುವ ಶಕ್ತಿಯಿದೆ.(ಅಮ್ಮನ ಮಮತೆಯೂ ಇನ್ನೊಂದು ವಿಧವಾದ ಪ್ರೀತಿಯೇ ಎನ್ನುವುದು ಬೇರೆ ಮಾತು..)
        ಎಲ್ಲರೂ ಪ್ರೀತಿಗೆ ಲೈಲಾ-ಮಜ್ನೂ,ರೋಮಿಯೋ-ಜೂಲಿಯೆಟ್..ಉದಾಹರಣೆ ಕೊಡುತ್ತಾರೆ.. ಅಷ್ಟೇ... ಅಥವಾ ಅದಕ್ಕಿಂತಲೂ ಹೆಚ್ಚು ಮನಸ್ಸಿಗೆ ಹಚ್ಚುವ,ಮನ ಮೆಚ್ಚುವ ಕಥೆ ರಾಧಾ-ಕೃಷ್ಣರದ್ದು...ರಾಧೆಯೆಂಬವಳ ಕಥೆಯನ್ನು ಹೆಚ್ಚಿನವರು ಕೇಳಿ ಅಲ್ಲಿಗೇ ಬಿಡುತ್ತಾರೆಯೆಂದು ನನ್ನ ಅನಿಸಿಕೆ.ರಾಧೆಗೆ ಕೃಷ್ಣನ ಅಷ್ಟ ಮಹಿಷಿಯರಲ್ಲಿ ಒಬ್ಬಳಾಗುವ ಯೋಗವಿರಲಿಲ್ಲ..ಆದರೆ ಕೃಷ್ಣನೊಂದಿಗೆ ರಾಧೆಯಷ್ಟು ಬೇರಾರ ಹೆಸರೂ ಜನಜನಿತವಾಗಲಿಲ್ಲ..ಭಾರತದಲ್ಲಿ ಅಸಂಖ್ಯ ರಾಧಾಕೃಷ್ಣ ದೇವಸ್ಥಾನಗಳಿವೆ..
         ಜಯದೇವನೆಂಬ ಕವಿಯು ರಾಧೆಯ ಸ್ವಗತವೆಂಬಂಥಾ ಅನೇಕ ಅಷ್ಟಪದಿಗಳನ್ನು ರಚಿಸಿದ್ದಾನೆ.ಹನ್ನೆರಡು ಶೃಂಗಾರಮಯವಾದ  ಹನ್ನೆರಡು ಸರ್ಗಗಳಲ್ಲಿ ರಾಧೆಯ ವಿರಹವನ್ನು ಭಾವಪೂರ್ಣವಾಗಿ ಹಾಡಿದ್ದಾನೆ..
      ಆಕೆಯ ಪ್ರೀತಿ,ವಿರಹ,ಕನವರಿಕೆ ಎಲ್ಲವೂ ಆಕರ್ಷಕ..(ಯಂಡಮೂರಿ ವೀರೇಂದ್ರನಾಥರ "ಪ್ರೇಮ" ದ ವೇದ ಸಂಹಿತಳ ಪ್ರೀತಿಯೂ ಇದೇ ರೀತಿಯೆಂದು ನನ್ನ ಭಾವನೆ....)
   ಉಳಿದ ಎಲ್ಲರಿಗೂ ಕೃಷ್ಣನೊಂದಿಗೆ ಮದುವೆಯಾಗುವ ಯೋಗವಿದ್ದರೂ ರಾಧೆಗೆ  ಆ ಅವಕಾಶವಿಲ್ಲ..ಆದರೆ ಇಂದು ಪ್ರಪಂಚದಲ್ಲಿ ಅಮರವಾಗಿರುವುದು ರಾಧಾಕೃಷ್ಣರ ಕಥೆ..
ರಾಧೇ ನೀ ಅಮರ.........
      ಹಾಗಾಗಿ ಸಾಂಪ್ರದಾಯಿಕ ಮದುವೆಗೇ ಜೈ...ಶುಭಪ್ರದಾಯಕ ಪ್ರೀತಿಗೂ ಸೈ..
ಆಗದೇ..?...

"ಸುಭಾಷಿತಗುಚ್ಛ-೨"


೬.ಧರ್ಮೋ ಯಶೋ ನಯೋ ದಾಕ್ಷ್ಯಂ ಮನೋಹಾರಿ ಸುಭಾಷಿತಂ|
ಇತ್ಯಾದಿ ಗುಣರತ್ನಾನಾಂ ಸಂಗ್ರಹೀ ನಾವಸೀದತಿ||
         ಧರ್ಮ,ಯಶಸ್ಸು,ವಿನಯ,ದಾಕ್ಷಿಣ್ಯ,ಮನೋಹರವಾದ ಸುಭಾಷಿತ
         ಇತ್ಯಾದಿಗಳನ್ನು ಸಂಗ್ರಹಿಸುವವನು(ಬಳಸುವವನು) ಎಂದಿಗೂ ದುಃಖಕ್ಕೊಳಗಾಗುವುದಿಲ್ಲ.


೭.ನಿದ್ರಾಂ ವಿದೂರಯಸಿ ಶಾಸ್ತ್ರರಸಂ ರುಣತ್ಸಿ
ಸರ್ವೇಂದ್ರಿಯಾರ್ಥಮಸಮರ್ಥ ವಿಧಿಂ ವಿಧತ್ಸೇ|
ಚೇತಶ್ಚ ವಿಭ್ರಮಯಸೇ ಕವಿತೇ ಪಿಶಾಚಿ
ಲೋಕಸ್ತಥಾಪಿ ಸುಕೃತೀ ತ್ವದನುಗ್ರಹೇಣ..||
        ನಿದ್ರಾಂ ವಿದೂರಯಸಿ=ಹೇ ಕವಿತೆಯೇ ನನ್ನ ನಿದ್ರೆಯನ್ನು ದೂರ ಮಾಡುವೆ..
        ಶಾಸ್ತ್ರರಸಂ ರುಣತ್ಸಿ=ಶಾಸ್ತ್ರಾಭಿರುಚಿಯನ್ನು ತಡೆಗಟ್ಟುವೆ..
        ಸರ್ವೇಂದ್ರಿಯಂ ಅಸಮರ್ಥಂ ಅರ್ಥಂ ವಿಧಿಂ ವಿಧತ್ಸೇ=
        ನನ್ನೆಲ್ಲಾ ಇಂದ್ರಿಯಗಳೂ ಅಸಮರ್ಥವಾಗುವಂತೆ ಮಾಡುತ್ತಿರುವೆ..
        ಚೇತಶ್ಚ ವಿಭ್ರಮಯಸೇ=ಬುದ್ಧಿ ಭ್ರಮೆಗೊಳ್ಳುವಂತೆ ಮಾಡುತ್ತಿರುವೆ..
        ತಥಾಪಿ ಪಿಶಾಚಿ ಕವಿತೇ=ಆದರೂ ಪಿಶಾಚಿ ಕವಿತೆಯೇ.
.        ತ್ವದನುಗ್ರಹೇಣ ಲೋಕಃ ಸುಕೃತೀ(ಭವತಿ)=ನಿನ್ನ ಅನುಗ್ರಹದಿಂದ
        ಲೋಕ ಧನ್ಯವಾಗಿದೆ...!!
ಹೇ ಕವಿತೆಯೇ ನನ್ನ ನಿದ್ರೆಯನ್ನು ದೂರ ಮಾಡುವೆ..ಶಾಸ್ತ್ರಾಭಿರುಚಿಯನ್ನು ತಡೆಗಟ್ಟುವೆ..ನನ್ನೆಲ್ಲಾ ಇಂದ್ರಿಯಗಳೂ ಅಸಮರ್ಥವಾಗುವಂತೆ ಮಾಡುತ್ತಿರುವೆ..ಬುದ್ಧಿ ಭ್ರಮೆಗೊಳ್ಳುವಂತೆ ಮಾಡುತ್ತಿರುವೆ..ಆದರೂ ಪಿಶಾಚಿ ಕವಿತೆಯೇ.ನಿನ್ನ ಅನುಗ್ರಹದಿಂದ ಲೋಕ ಧನ್ಯವಾಗಿದೆ...!!(ಇಲ್ಲಿ ಕವಿತೆಗಳನ್ನು ನಿಂದಾಸ್ತುತಿ ಮಾಡಲಾಗಿದೆ ಎಂದರೆ ಪ್ರತ್ಯಕ್ಷವಾಗಿ ನಿಂದಿಸಿ ಪರೋಕ್ಷವಾಗಿ ಹೊಗಳಲಾಗಿದೆ..)


೮.ಅನಿಚ್ಛಂತೋಪಿ ವಿನಯಂ ವಿದ್ಯಾಭ್ಯಾಸೇನ ಬಾಲಕಾಃ|
ಭೇಷಜೇನೇವ ನೈರುಜ್ಯಂ ಪ್ರಾಪಣೀಯಾಃ ಪ್ರಯತ್ನತಃ||-ಹರಿಹರ ಸುಭಾಷಿತ
        ಬಾಲಕಾಃ ಅನಿಚ್ಛಂತೋಪಿ= ಮಕ್ಕಳಿಗೆ ಇಷ್ಟವಿಲ್ಲದಿದ್ದರೂ
        ಭೇಷಜೇನ ಏವ ನೈರುಜ್ಯಂ=ಔಷಧವನ್ನು ಕೊಟ್ಟು ರೋಗ ಶಮನಗೊಳಿಸುವಂತೆ
        ಪ್ರಯತ್ನತಃ ವಿನಯಂ ವಿದ್ಯಾಭ್ಯಾಸೇನ ಪ್ರಾಪಣೀಯಾಃ=
        ಪ್ರಯತ್ನಪಟ್ಟು ವಿನಯ ಹಾಗೂ ವಿದ್ಯೆಗಳಿಂದ ಸಂಪನ್ನರಾಗಿಸಬೇಕು.
ಮಕ್ಕಳು ಬೇಸರಿಸುತ್ತಾರೆಂದು ಅವದನ್ನು ಮಿತಿಮೀರಿ ಮುದ್ದಿಸಿದರೆ ದೊಡ್ಡವರಾದ ನಂತರ ಅವರ ಗುಣ ಒಳ್ಳೆಯದಾಗದು. ಅವರಿಗೆ ಜೀವನ ನಡೆಸಲು ಕಷ್ಟವಾಗ ಬಹುದು ಆದ್ದರಿಂದ ಅವರನ್ನು ವಿದ್ಯಾ ವಿನಯ ಸಂಪನ್ನರಾಗಿಸಬೇಕೆಂಬುದು ಇದರ ಅರ್ಥ.


೯. ಈರ್ಷ್ಯೀ ಘೃಣೀತ್ವಸಂತುಷ್ಟಃ ಕ್ರೋಧನೋ ನಿತ್ಯ ಶಂಕಿತಃ|
ಪರ ಭಾಗ್ಯೋಪಜೀವೀ ಚ ಷಡೇತೇ ದುಃಖಭಾಗಿನಃ||-ಮಿತ್ರಭೇದ
  ಈರ್ಷ್ಯೀ=ಪರರ ಏಳಿಗೆಯನ್ನು ಕಂಡು ಅಸೂಯೆ ಪಡುವವನು,
        ಘೃಣೀ=ಅತಿಯಾದ ಕರುಣೆ ತೋರುವವನು,ಅಸಂತುಷ್ಟಃ=ಎಷ್ಟಿದ್ದರೂ ತೃಪ್ತಿಯಿಲ್ಲದವನು,
        ಕ್ರೋಧನಃ=ಕೋಪಿಯು,ನಿತ್ಯ ಶಂಕಿತಃ=ಯಾವಾಗಲೂ ಸಂಶಯಪಡುವವನು,
        ಹಾಗೂ ಪರ ಭಾಗ್ಯೋಪಜೀವೀ =ಪರಾವಲಂಬನೆಯಿಂದ ಜೀವಿಸುವವನು...
        ಈ ಆರು ವರ್ಗದ ಜನರು ನಿತ್ಯವೂ ದುಃಖಿಗಳಾಗುತ್ತಾರೆ.
ಪರರ ಏಳಿಗೆಯನ್ನು ಕಂಡು ಅಸೂಯೆ ಪಡುವವನು,ಅತಿಯಾದ ಕರುಣೆ ತೋರುವವನು,ಎಷ್ಟಿದ್ದರೂ ತೃಪ್ತಿಯಿಲ್ಲದವನು,ಕೋಪಿಯು,ಯಾವಾಗಲೂ ಸಂಶಯಪಡುವವನು,ಪರಾವಲಂಬನೆಯಿಂದ ಜೀವಿಸುವವನು...ಈ ಆರು ವರ್ಗದ ಜನರು ನಿತ್ಯವೂ ದುಃಖಿಗಳಾಗುತ್ತಾರೆ ಎಂದು ಸುಭಾಷಿತಕಾರನು ಹೇಳುತ್ತಾನೆ.ಇಲ್ಲಿ ನಮ್ಮಲ್ಲಿರಬಾರದ ಅಸಾಮರ್ಥ್ಯ ಹಾಗೂ ದುರ್ಗುಣಗಳನ್ನು ಹೇಳಲಾಗಿದೆ..


೧೦.ತದಾ ರಮ್ಯಾಣ್ಯರಮ್ಯಾಣಿ ಪ್ರಿಯಾಃ ಶಲ್ಯಂ ತದಾಸವಃ|
ತದೈಕಾಕೀ ಸ ಬಂಧುಃ ಸನ್ನಿಷ್ಟೇನ ರಹಿತೋ ಯದಾ||-ಕಿರಾತಾರ್ಜುನೀಯ
  ಯದಾ ಸನ್ನಿಷ್ಟೇನ ರಹಿತಃ=ನಮಗೆ ಬೇಕಾದ ವಸ್ತು(ವ್ಯಕ್ತಿ)ವಿಲ್ಲದಿದ್ದರೆ
        ರಮ್ಯಾಣಿ ಅರಮ್ಯಾಣಿ ತತ್=ಸುಂದರವಾದುದೂ ವಿಕಾರವಾಗಿ ಕಾಣುವುದು.
        ಪ್ರಿಯಾಃ ಆಸವಃ ಶಲ್ಯಂ ತತ್=ಪ್ರಿಯವಾದ ಪ್ರಾಣವೂ ಮುಳ್ಳಿನಂತಾಗುತ್ತದೆ.
        ಬಂಧುಃ ಸಃ ಏಕಾಕೀ ತತ್=ಬಂಧುಗಳಿದ್ದರೂ ಏಕಾಗಿಯಂತೆ ಬೇಸರವಾಗುತ್ತದೆ.
ನಮಗೆ ಬೇಕಾದ ವಸ್ತು(ವ್ಯಕ್ತಿ)ವಿಲ್ಲದಿದ್ದರೆ ಸುಂದರವಾದುದೂ ವಿಕಾರವಾಗಿ ಕಾಣುವುದು.ಪ್ರಿಯವಾದ ಪ್ರಾಣವೂ ಮುಳ್ಳಿನಂತಾಗುತ್ತದೆ.ಬಂಧುಗಳಿದ್ದರೂ ಏಕಾಗಿಯಂತೆ ಬೇಸರವಾಗುತ್ತದೆ

Thursday 12 January 2012

ನಿಟ್ಟುಸಿರು..


ಮಿಡಿಯುತಿದೆ  ನೆನಪಾಗಿ ತೋರೆಯ ದಯಾ..
ತುಡಿಯುತಿದೆ ನಿನಗಾಗಿ ನನ್ನ ಹೃದಯ..
ಕುಡಿಯುತಿರೆ ಒನಪಾಗಿ ನನ್ನ ರಾಧೆಯ..
ಒಡೆಯುತಿರೆ ಯಾಕಾಗಿ ದೂರವಾದೆಯಾ..

 ತಿಳಿದೆ ನಾನು ತಾವರೆ ಎಲೆಯೆಂದು
ಉಳಿದೆ ನೀನು "ಸಾವಿ"ರದ ಮುತ್ತೆಂದು
ನಾ ಬಗ್ಗಿ ನಿಲ್ಲಲು ನೀ ಜಾರಿ ಬಿದ್ದೆಯಾ...?
ಮುತ್ತೊಡೆದು ಹರಿಸಿದೆ ಕಣ್ಣಿಂದ ನಿದ್ದೆಯ..

ಅಂದು ಕಪ್ಪಿಟ್ಟ ಮನವನ್ನು
ಬೆಳಗಿತ್ತು ನಿನ್ನ ಸ್ನಿಗ್ಧ ಮುಖ..
ಇಂದು ಕಂಗೆಟ್ಟ ತನುವನ್ನು
ಸುಡುತಿದೆ ದಗ್ಧ ಸುಖ...

ಕಂಪಡರಿ ಉಣಿಸಿದ್ದ ನನ್ನ ಮಲ್ಲಿಗೆ..
ಕೆಂಪಡರಿ ತಣಿಸಿದ್ದೆ ಹೋದೆ ಎಲ್ಲಿಗೆ..?
ಜಗವಿರುವುದೆ ಹೀಗೆ..!
ಸಾಯುವುದ ಮುನ್ನ ಮರೆಯುವರು ಬೇಗೆ..
ಮೊಗವಿರಲಿ ಹೀಗೆ..
ಕಾಯುವುದು ನನ್ನ ಹೃದಯದ ಜಾಗೆ.....

ಚುಟುಕ "೨೧-೪೦"


 "ಜಗ-ಜನ"
೨೧.ಸಂಪತ್ತು ಬಂದಾಗ ಮೆರೆಯುವರು..
ಜಗತ್ತು ಮುಂದಾಗಿ ಮರೆಯುವರು..
ಆಪತ್ತು ಎಂದಾಗ ಮೊರೆಯುವರು
ಕೊನೆಗೆ ಕತ್ತು ಮುಂಬಾಗಿ ಮುರಿಯುವರು..!!
"ಸೃಷ್ಟಿ-ದೃಷ್ಟಿ"
೨೨..ನಿಸರ್ಗವೊಂದು  ಆತನ ಸೃಷ್ಟಿ..
ಪೊರೆಯುವುದು ನಿತ್ಯ ನಿರಂತರ ವೃಷ್ಟಿ..
ಸ್ವರ್ಗವೆಂದು  ತಿಳಿಯೆ ಚಿಂತನ ದೃಷ್ಟಿ..
ಅರಿಯವುದು ಸತ್ಯ ಅನಂತ ಸಮಷ್ಟಿ...
"ಮಾತು-ಮಂಥನ"
೨೩.ಬಂದು ಕೇಳುವಿರೆ ರುಚಿರ ಮಾತಿನ..
ಹೊಂದಿ ಬಾಳುವಿರೈ ಚಿರ ನೂತನ..
ಇಂದು ಕಾಣುವುದು ತಾರ ದೂರದಿ..
ಮುಂದೆ ತಾಣವದು ಚಿತ್ತಾರ ತೀರದಿ...
"ಮಗಳು"
೨೪.ದೂರದಿರಿ ಹೆಣ್ಣೆಂದು ಮಗಳ..
ಅರಿತಿರಿ ಪುಣ್ಯವದು ಜನುಮಗಳ..!
ತೊಲಗುವುದು ಬರಡುಮನ ಗಲ್ಲಿ
ಬೆಳಗುವುದು ಎರಡುಮನೆ ಜಗಲಿ...!!
"ಕಲಿಕೆ"
೨೫.ಬೀಳುವುದು ಸಹಜ ಮೊದಲು
ಹೇಳುವುದು ಶುರು ನಿಜ ತೊದಲು
ಹೊರಳಿ ಕಲಿಯದೆ ಸಾಧ್ಯವೆ ನಡೆಯಲು
ಮರಳಿ ಉಲಿಯದೆ ವೇದ್ಯವೆ ನುಡಿಯಲು
"ಹೊಂದಾಣಿಕೆ"
೨೬.ಬದುಕಲು ಇರುವುದು ಹೊಟ್ಟೆಪಾಡು
ಬದುಕಿಸಲು ಬರುವುದು ಕಟ್ಟುಪಾಡು
ಬದುಕಿನಲಿ ಹೊಂದಿರಲು ಮಾರ್ಪಾಡು
ಬದುಕುವಿರಿ ಹಗಲಿರುಳ ಏರ್ಪಾಡು...!!
"ತೃಪ್ತಿ"
೨೭.ಎಷ್ಟು ದಿನ ಇರಬಲ್ಲೆ ನೀ ನಗದೇ..?
ಕಷ್ಟ ಚಿನ್ನ ತರಲಾರೆ ನಾ ನಗದೇ...!
ತೃಪ್ತಿಯಿರೆ ಅಷ್ಟು ಸಾಕು ಅವನಿಗದೇ..
ವ್ಯಾಪ್ತಿಮೀರೆ ನಷ್ಟಭಾಕ್ ಅವನೀ-ಗಾದೆ...!(ಅವನಿ=ಭೂಮಿ)
"ಮಾಯಾಜಾಲ"
೨೮.ನಲ್ಲೆ ನನಗೆ ಸಿಕ್ಕಳೆಂದು ತಬ್ಬಿದ್ದೆ..
ಬಲ್ಲೆ ನೀ ನನ್ನನೆಂದು ಉಬ್ಬಿದ್ದೆ..
ಒಳ್ಳೇ ಮನದನ್ನೆ ಆಗುವಳೆಂದು ನಂಬಿದ್ದೆ
ಸುಳ್ಳೇ ನೀ ಆಡಿದ್ದೇಕೆ ನಾ ಬಿದ್ದೆ...!
"ಮಾತು-ವ್ಯವಹಾರ"
೨೯.ಸ್ವಚ್ಛವಾಗಿರಲಿ ನಿಮ್ಮ ಮನದಾಳ
ತುಚ್ಛ ಯಾಕಿರಲಿ ಸುಮ್ಮನೇ ಮನ-ದಾಳ
ಹೆಚ್ಚು ಬಾಡದಿರಲಿ ಸೂಕ್ಷ್ಮ ಮನ -ದಳ.
ಕೊಚ್ಚಿ ಹೋಗದಿರಿ ಭಸ್ಮಮಾಗೆ ಮನತಳ
"ವಿವೇಕ"
೩೦.ಸಾಧಿಸಲು ಸಾಲದು ಕೇವಲ ಇಯತ್ತೆ (ವಿದ್ಯಾಭ್ಯಾಸ)
ಭೇದಿಸಲು ಕೇಳದು ಭೀಮಬಲ ನೋಯತ್ತೆ..!
ಬಲಿತಾಗ ಬೆಳೆಯಬೇಕು ಬುದ್ಧಿಮತ್ತೆ..
ಸೋತಾಗ ಹೊಳೆಯುವುದು ಬುದ್ಧಿ... ಮತ್ತೆ...!
"ಗುರು"
೩೧.ಗುರುಬಲವು ಜ್ಞಾನದೀವಿಗೆ ಹಚ್ಚಿತ್ತ..
ಗುರಿಯೆಡೆಗೆ ಸಾಗುವ ಛಲದ ಕಿಚ್ಚಿತ್ತ..
ಗುರುತರ ಸಮಸ್ಯೆಗಳ ಪರಿಹರಿಸೆ ಮೆಚ್ಚಿತ್ತ..
ಗರಿಕೆಯಂದದಿ ನಿವಾರಿಸಿತೆ ನಿನ್ ಚಿತ್ತ..?
"ಜನ್ಮದಿನ"
೩೨."ಸಾವಿರ"ದ ವರ್ಷ ಬೇಡ  ಕಲ್ಲಿನಂತೆ ಸಂಪಿನಲಿ
"ಸಾವಿ"ರದ ಹರ್ಷ ನೋಡು ಮಲ್ಲಿಗೆಯ ಕಂಪಿನಲಿ
ನೂರ್ಕಾಲ ಬಾಳು ನೀ ನೋವಿರಲಿ ನಲಿವಿರಲಿ
ಮೂರ್ಕಾಲ ಮುಪ್ಪಿನಲಿ ಜನಕೆ ಜನ್ಮದಿನ ನೆನಪಿರಲಿ..!
(ಲೋಕ ಮೆಚ್ಚುವ ಕೆಲ್ಸ ಮಾಡಿದ್ರೆ ಜನ ನಮ್ಮ ಜನ್ಮದಿನ ನೆನಪಿಸಿಕೊಳ್ಳುವರು..)
"ಭೂಮಿ"
೩೩.ಹುಡಿಯಾಗದಿರಲಿ ಭೂಮಿ ಭಿತ್ತಿಯ ಒಡಲು
ಕರುಳು ಹಿಂಡದೇ ನೆಲದ ನೆತ್ತಿಯ ಒಡೆಯಲು...?
ದುಡುಕಿ ಕದಡದಿರಿ ಸ್ವಾಮಿ ಗುತ್ತಿಗೆಯೆ ಕಡಲು..?
ಮರುಳು ಮಂಡೆಯೇ ಜಲದ ಬುತ್ತಿಯ ಕಡೆಯಲು...?
"ಜಗ-ಜೀವನ"
೩೪.ಉಳಿಯಬಹುದೆ ನಮಗೆ ಸ್ನೇಹಮಯ ಪ್ರಪಂಚ..?
ಅಳಿಯಬಹುದಾದರೆ ಅತ್ಯಾಸೆಯ ಇಂದ್ರಿಯ ಪಂಚ..!
ಗಳಿಸಬಹುದೆ ನಾವು ಸಾಧನೆಯ ಜಗತ್ತು....?
ಕಳಿಸಬಹುದಾದರೆ ನಮ್ಮ ಲೋಭದ ಗತ್ತು....!!
"ಮನಃಶುದ್ಧಿ"
೩೫.ಕಣದೊಳಗೂ ದೇವರೆಂದು ಇದ್ದರೆ ಭಕ್ತಿ..
ಮನದೊಳಗೆ ಉಂಟಾಗದು ಶಬ್ದಗಳ ವಿಭಕ್ತಿ..!
ಜನರೊಳಗೆ ನಂಟಾಗಲು ಕಾರಣ ಭಜನೆ..
ಗುಣದೊಳಗೆ ಗಂಟಾಗಲು ಹೂರಣ ವಿಭಜನೆ...!
"ಮಕ್ಕಳ ಪಾಲನೆ"
೩೬.ಮಗುವಿನಲ್ಲಿ ನಗೆಯನ್ನು ಧರಿಸು..
ಯೋಗ್ಯತೆಯಲ್ಲಿ ಯೋಗವನ್ನು ನಿರ್ಧರಿಸು..
ಮಿತಿಯಲ್ಲಿ ಮತಿಯನ್ನು ಹೆದರಿಸು..
ಬೆಳಕಿಗಾಗಿ ಬಾಳುವಿಕೆಗಾಗಿ ಸುಧಾರಿಸು..
"ಮಲ್ಲಿ-ಮಲ್ಲಿಗೆ"
೩೭.ನವಿರಾದ ಕಂಪನೀಡಿ ಏಕೆ ಕಾಡುವೆ ಮಲ್ಲಿಗೆ..?
ಸವಿಯಾದ ಕಂಪನಿಗಾಗಿ ಎಂದು ಬರುವೆ ನಮ್ಮಲ್ಲಿಗೆ..?!
ಕವಿಯಾದ ಪಂಪನಿಗಾಗಿ ಹೋದೆಯಾ ಹುಬ್ಬಳ್ಳಿಗೆ..?
ಜೀವಿಯಾದ ನೆನಪಿಗಾಗಿ ತರು ಬೇಡವೆ ಬಳ್ಳಿಗೆ...?!
"ರಾಜಕಾರಣಿ"
೩೮.ಸ್ವಂತಕ್ಕೆ ಗೆಲ್ಲಲು ಅಧಿಕಾರ,
ಅಂತಕ್ಕೆ ಸೋತಾಗ ಧಿಕ್ಕಾರ...!!
ಗೆದ್ದಾಗ ಮಂತ್ರಿಗಳ ಪ್ರಕಾರ,
ಬಿದ್ದಾಗ ಕುತಂತ್ರಿಗಳ ಪ್ರತೀಕಾರ...!!
"ಕೃತಘ್ನತೆ"
೩೯.ದಾರಿದ್ರ್ಯದಿ ಬೇಕು ತಾಯಿ ನೀಡುವ ಅನ್ನ..
ದಾರಿ ಕಂಡರೆ ಸಾಕು ಬಾಯಿ ಗೋಡೆಗೇ ಕನ್ನ,
ದೂರಿಕೊಳ್ಳುವರು ಸತ್ಯ ತಿಳಿಯುವ ಮುನ್ನ,
ದೊರಕುವುದೇ ಮಿಥ್ಯ ಅಳಿಯದೇ ಮನ್ನಾ...?
"ಚಿತ್ತ ಶುದ್ಧಿ"
೪೦.ಶುದ್ಧವಾಗಿರಬೇಕು ನಮ್ಮಮನೆ ಬಚ್ಚಲು,
ಯುದ್ಧ ಮಾಡದಿರಿ ಮನದೊಳಗೆ ಬೆಚ್ಚಲು,
ಬುದ್ಧಿ ಓಡಿಸಿರಿ ಅವಕಾಶದ ಹಾದಿ ಮುಚ್ಚಲು,
ಬದ್ಧವಾಗಿರಿ ಜನಕೆ ನಿಮ್ಮ ಸಾಧನೆಯ ಮೆಚ್ಚಲು.

"ಸುಭಾಷಿತಗಳು"


೧.ಘಟ್ಟನಂ ಪ್ರತಿಭಾ ಕೇಚಿತ್, ಕೇಚಿತ್ ಘಟ್ಟನಂ ನಿಸ್ಪೃಹಃ|
 ಘಟದೀಪ ಪ್ರಭಾ ಕೇಚಿತ್, ಕೇಚಿದಾಕಾಶ ಸನ್ನಿಭಃ||
            ಘಟ್ಟನಂ ಪ್ರತಿಭಾ ಕೇಚಿತ್=ಕೆಲವು ಜನರ ಪ್ರತಿಭೆ ಗೊತ್ತಾಗಬೇಕಾದರೆ ಸ್ವಲ್ಪ ಹೆಟ್ಟಬೇಕು                  (ಪ್ರೋತ್ಸಾಹಿಸಬೇಕು) ಹೇಳಿ...
            ಕೇಚಿತ್ ಘಟ್ಟನಂ ನಿಸ್ಪೃಹಃ=ಕೆಲವರಿಗೆ ಹೆಟ್ಟುವುದೇ ವ್ಯರ್ಥ.ಎಷ್ಟು ಪ್ರೋತ್ಸಾಹಿಸಿಯೂ ಪ್ರಯೋಜನ ಇಲ್ಲ.
            ಘಟದೀಪ ಪ್ರಭಾ ಕೇಚಿತ್=ಇನ್ನು ಕೆಲವರಿಗೆ ಪ್ರತಿಭೆ ಇದೆ. ಆದರೆ ಬೆಳಕಿಗೆ ಬರುವುದಿಲ್ಲ.ಪಾತ್ರೆಯೊಳಗಿಟ್ಟ                        ದೀಪದಂತೆ ಯಾರಿಗೂ ಗೊತ್ತಾಗಲಾರದು....
               ಕೇಚಿದಾಕಾಶ ಸನ್ನಿಭಃ=ಇನ್ನೂ ಕೆಲವರಿಗೆ ಯಾರ ಪ್ರೋತ್ಸಾಹ ಇಲ್ಲದ್ದರೂ ಬೆಳಕಿಗೆ ಬರುತ್ತದೆ ಎನ್ನುತ್ತಾರೆ...
ಅರ್ಥ:    ಕೆಲವು ಜನರ ಪ್ರತಿಭೆ ಗೊತ್ತಾಗಬೇಕಾದರೆ ಸ್ವಲ್ಪ ಪ್ರೋತ್ಸಾಹಿಸಬೇಕು.ಕೆಲವರಿಗೆ ಹೆಟ್ಟುವುದೇ ವ್ಯರ್ಥ.ಎಷ್ಟು ಪ್ರೋತ್ಸಾಹಿಸಿಯೂ ಪ್ರಯೋಜನ ಇಲ್ಲ.ಇನ್ನು ಕೆಲವರಿಗೆ ಪ್ರತಿಭೆ ಇದೆ. ಆದರೆ ಬೆಳಕಿಗೆ ಬರುವುದಿಲ್ಲ.ಪಾತ್ರೆಯೊಳಗಿಟ್ಟ   ದೀಪದಂತೆ ಯಾರಿಗೂ ಗೊತ್ತಾಗಲಾರದು....ಇನ್ನೂ ಕೆಲವರಿಗೆ ಯಾರ ಪ್ರೋತ್ಸಾಹ ಇಲ್ಲದ್ದರೂ ಬೆಳಕಿಗೆ ಬರುತ್ತದೆ ಎನ್ನುತ್ತಾರೆ...

 ೨. ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈಃ
 ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ|
 ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾಃ
 ಪ್ರಾರಬ್ಧಮುತ್ತಮ ಜನಾಃ ನ ಪರಿತ್ಯಜಂತಿ||
       ಇಲ್ಲಿ ಜನರನ್ನು ಅವರ ಛಲ,ಸಾಮರ್ಥ್ಯಕ್ಕೆ ಅನುಗುಣವಾಗಿ ಮೂರು ವರ್ಗಗಳಾಗಿ ವಿಭಾಗಿಸಿದ್ದಾರೆ.
       ಮೊದಲಸಾಲಿನಲ್ಲಿ "ನೀಚೈಃ ವಿಘ್ನಭಯೇನ ನ ಖಲು ಪ್ರಾರಭ್ಯತೇ"=ನೀಚ ವರ್ಗದ ಜನ ಯಾವುದೇ ಕೆಲಸವನ್ನು            ವಿಘ್ನಭಯದಿಂದ  ಪ್ರಾರಂಭಿಸುವುದಿಲ್ಲ(ಇಲ್ಲಿ ನೀಚ ಎಂದರೆ ಜಾತಿಯಿಂದ ಅಥವಾ ಕೆಟ್ಟ ಎಂದರ್ಥವಲ್ಲ,     ಹೇಡಿಗಳೆನ್ನಬಹುದು)
       ಎರಡನೆ ಸಾಲಿನಲ್ಲಿ "ಮಧ್ಯಾಃ ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ"=ಮಧ್ಯಮ ಸಾಮರ್ಥ್ಯದಜನರು ಕೆಲಸ ಆರಂಭಿಸಿ ಅಡ್ಡಿ ಬಂದ ಕೂಡಲೇ ನಿಲ್ಲಿಸುತ್ತಾರೆ ಎಂದಿದ್ದಾರೆ.
       ೩,೪ನೇ ಸಾಲಿನಲ್ಲಿ ಉತ್ತಮ ಸಾಮರ್ಥ್ಯದ ಜನರ ಕುರಿತು ಹೇಳಿದ್ದಾರೆ"ಪುನಃ ಪುನರಪಿ ವಿಘ್ನೈಃ ಪ್ರತಿಹನ್ಯಮಾನಾಃ ಉತ್ತಮ ಜನಾಃ ಪ್ರಾರಬ್ಧ ನ ಪರಿತ್ಯಜಂತಿ"=ನಿಜವಾದ ಸಾಮರ್ಥ್ಯವುಳ್ಳ ಜನರು ಪ್ರತಿ ಹಂತದಲ್ಲೂ ವಿಘ್ನ ಉಂಟಾದರೂ ಹಿಡಿದ ಕೆಲಸ ಪೂರೈಸದೇ ಬಿಡುವುದಿಲ್ಲ ಎನ್ನುತ್ತಾರೆ
(ಲಾಸ್ಯ:...ಅಂದ ಹಾಗೇ ನೀವು ಯಾವ ವರ್ಗಕ್ಕೆ ಸೇರಿದವರು.....?!!!)

೩.ಪರಿವರ್ತಿನಿ ಸಂಸಾರೇ ಮೃತಃ ಕೋ ವಾ ನ ಜಾಯತೇ|
 ಸ ಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಂ||
         ಪರಿವರ್ತಿನಿ ಸಂಸಾರೇ=ತಿರುಗುತ್ತಿರುವ ಈಸಂಸಾರ ಚಕ್ರದಲ್ಲಿ
         ಕೋ ನ ಮೃತ ವಾ ಜಾಯತೇ=ಯಾರು ಹುಟ್ಟುವುದಿಲ್ಲ?ಯಾರು ಸಾಯುವುದಿಲ್ಲ?
         ಯೇನ ಜಾತೇನ ವಂಶಃ ಸಮುನ್ನತಿಂ ಯಾತಿ ಸ ಜಾತಃ=ಯಾರ ಹುಟ್ಟುವಿಕೆಯಿಂದ
         ಅವನ ವಂಶದ ಕೀರ್ತಿ ಬೆಳಗುವುದೋ ಅವನೇ ನಿಜವಾಗಿ ಹುಟ್ಟಿದವನು.
          (ಅಂದರೆ ಲೋಕ ಮೆಚ್ಚುವ ಕೆಲಸ ಮಾಡಿ ಕೀರ್ತಿ ಪಡೆದವನೆಂದರ್ಥ)ಅಂದರೆ
ಉದಾಹರೆಣೆಗೆ:
೧. ವಿನಾಯಕ ಸಾವರ್ಕರರ ಪ್ರತಿಭೆಯಿಂದಾಗಿ "ಒಹೋ ಇವ ದಾಮೋದರ ಸಾವರ್ಕರರ ಮಗನೋ?"
ಹೇಳಿ ಸಣ್ಣಾಗಿಪ್ಪಗ ಅವರ ನೆರೆಕರೆಯವು ಕೇಳಿದಂತೆ....
೨.ಅವರಿಂದಾಗಿ ನಾವಿಂದು "ಸಾವರ್ಕರ" ಎಂಬ ವಂಶದ ಹೆಸರು ತಿಳಿದಂತೆ...
೩.ಗೋಖಲೆ,ರಾನಡೆ,ಫಡ್ಕೆ,ಸಾವರ್ಕರ..ರಿಂದಾಗಿ "ಚಿತ್ಪಾವನ" ಎಂಬ ಶಬ್ದ ಬ್ರಿಟಿಷರನ್ನು ಕಾಡಿದಂತೆ...
೪."ಸಾವರ್ಕರಿಸಂ"ಎನ್ನುವುದು ಜನಹಿತ,ದೇಶದಹಿತ ಎಂದು ಮರಾಠೀಯರು ತಿಳಿಯಲು ಕಾರಣವಾದಂತೆ..
೫.ನಾವೆಲ್ಲಾ "ಮರಾಠೀಯ" ಹಾಗೂ "ಬಂಗಾಳೀಯ"ರನ್ನು(ಅಂದಿನ ಕಾಲದ...ಇಂದೂ ಕೂಡಾ..) ಅಪ್ರತಿಮ ದೇಶಭಕ್ತರೆಂದು ತಿಳಿಯಲು ಕಾರಣವಾದಂತೆ...
೬.ಅ)ದೇಶಕ್ಕೆ ದೇಶವೇ ನಿದ್ರಿಸುತ್ತಿದ್ದ ಕಾಲದಲ್ಲಿ...
   ಆ)ಕಾಶಿಯ ಬ್ರಾಹ್ಮಣ ವಿದ್ವಾಂಸರು ಇಂಗ್ಲೆಂಡಿನ ೨ನೇ ಜಾರ್ಜ್ನನ್ನು ದೈವಾಂಶ ಸಂಭೂತನೆಂದು
      ಸ್ವಸ್ತಿ ಮಂತ್ರಗಳಿಂದ ಅವನ ಸಾರೋಟನ್ನು ಎಳೆಯುತ್ತಿದ್ದ ಕಾಲದಲ್ಲಿ...!!!
    ಇ)ನಾವೆಲ್ಲ ಹಾಡಿ ಹೊಗಳುವ ಗಾಂಧೀಜಿ ಇನ್ನೂ ಆಫ್ರಿಕಾದಲ್ಲಿ ಬ್ಯಾರಿಸ್ಟರಿಕೆ ಮಾಡುತ್ತಿದ್ದಾಗ...
   ಫ್ರಾನ್ಸ್.ಯುರೋಪ್,ಜರ್ಮನಿ,..ಅಷ್ಟೇ ಏಕೆ ಅಮೆರಿಕದಲ್ಲಿ ಕೂಡಾ ಇಂಗ್ಲೆಂಡಿನಲ್ಲಿ ಸಾವರ್ಕರ್ ಬಂಧನವಾದಾಗ
   ಅಪ್ರತಿಮ "ಭಾರತೀಯ" ದೇಶಭಕ್ತನೆಂದು ಸುದ್ದಿಯಾದಂತೆ...!!!
 ಈ ರೀತಿಯಾಗಿ ವಂಶವೆಂಬುದು ೧ರಿಂದ ೬ರ ವರೆಗೆ "ಇನ್ವರ್ಟೆಡ್ ಕೊಮಾದೊಳಗೆ" ತನ್ನ ಅರ್ಥವನ್ನು ಅನೇಕ ರೀತಿಯಲ್ಲಿ ಬದಲುತ್ತದೆ.
(ಸಾವರ್ಕರರು ನನ್ನ ದೃಷ್ಟಿಯಲ್ಲಿ ಆದರ್ಶವಾಗಿರುವುದರಿಂದ ಹೀಗೆ ಬರೆದಿದ್ದೇನೆ.ಇಷ್ಟವಿಲ್ಲದವರು ಬೇರೆ ಉದಾಹರಣೆ ಊಹಿಸಿಕೊಳ್ಳಬಹುದು....)

೪.ಅನಾಗತ ವಿಧಾತಾ ಚ ಪ್ರತ್ಯುತ್ಪನ್ನ ಮತಿಶ್ಚಯಃ|
 ದ್ವಾವೇವ ಸುಖಮೇಧೇತೇ ದೀರ್ಘಸೂತ್ರೀ ವಿನಶ್ಯತಿ||
         ಅನಾಗತ ವಿಧಾತಾ ಚ=ಮುಂದೆ ಬರಲಿರುವ ಸಮಸ್ಯೆಯ ಪರಿಹಾರಕ್ಕೆ ಸಿದ್ಧತೆ ಮಾಡಿಕೊಂಡವನು
         ಪ್ರತ್ಯುತ್ಪನ್ನ ಮತಿಶ್ಚಯಃ=ಸಮಯಕ್ಕೆ ಸರಿಯಾಗಿ ವಿವೇಕದಿಂದ ಬುದ್ಧಿಯೋಡಿಸುವವನು
        ದ್ವಾವೇವ ಸುಖಮೇಧೇತೇ=ಈ ಎರಡು ವರ್ಗದವರು ಸುಖವನ್ನು(ಯಶಸ್ಸನ್ನು,ನೆಮ್ಮದಿಯನ್ನು)ಹೊಂದುತ್ತಾರೆ.
        ದೀರ್ಘಸೂತ್ರೀ ವಿನಶ್ಯತಿ=ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದವನು  ನಾಶ ಹೊಂದುತ್ತಾರೆ...
ಯಾವತ್ತೂ ನಾವು ಕೆಲಸ ಮಾಡುವಾಗ ಅಥವಾ ಕೆಲವು ಪರಿಸ್ಥಿತಿಗಳಲ್ಲಿ ಸಮಸ್ಯೆ ಬರುವ ಮೊದಲೇ ಪರಿಹರಿಸಲು ಸಿದ್ಧತೆ ಮಾದಿಕೊಳ್ಳ ಬೇಕು ಅಥವಾ ತತ್ ಕ್ಷಣ ಪ್ರತಿಕ್ರಿಯಿಸಿ ಪ್ರತಿವಿಧಿ ರೂಪಿಸಬೇಕು ವಿಳಂಬ ಮಾಡಿದರೆ ಯಾವುದೇ ಕೆಲಸವನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದು ಇದರರ್ಥ..

೫.ಖಿನ್ನಂ ಚಾಪಿ ಸುಭಾಷಿತೇನ ರಮತೇ ಸ್ವೀಯಂ ಮನಃಸರ್ವದಾ
  ಶ್ರುತ್ವಾನ್ಯಸ್ಯ ಸುಭಾಷಿತಂ ಖಲು ಮನಃ ಶ್ರೋತುಂ ಪುನರ್ವಾಂಛತಿ|
  ಅಜ್ಞಾನ್ ಜ್ಞಾನವತೋsಪ್ಯನೇನ ಹಿ ವಶೀಕರ್ತುಂ ಸಮರ್ಥೋ ಭವೇತ್
  ಕರ್ತವ್ಯೋ ಹಿ ಸುಭಾಷಿತಸ್ಯ ಮನುಜೈರಾವಶ್ಯಕಃ ಸಂಗ್ರಹಃ||
         ಸರ್ವದಾ ಖಿನ್ನಂ ಮನಃ ಚ ಅಪಿ=ದುಃಖಭರಿತ ಮನಸ್ಸು ಕೂಡಾ,
         ಸುಭಾಷಿತೇನ ಸ್ವೀಯಂ ರಮತೇ=ಒಳ್ಳೆಯ ಮಾತನ್ನು(ಸುಭಾಷಿತ) ಕೇಳಿ ಮುದಗೊಳ್ಳುತ್ತದೆ.
         ಅನ್ಯಸ್ಯ ಸುಭಾಷಿತಂ ಶ್ರುತ್ವಾ=ಬೇರೆಯವರು ಹೇಳಿದ ಸುಭಾಷಿತವನ್ನು ಕೇಳಿ,
         ಮನಃ ಖಲು ಪುನಃ ಶ್ರೋತುಂ ವಾಂಛತಿ=ಮನಸ್ಸು ಮತ್ತೆ ಕೇಳಬೇಕೆಂದು ಹಂಬಲಿಸುತ್ತದೆ.
         ಅಜ್ಞಾನ್ ಜ್ಞಾನವತಃ ಅಪಿ=ತಿಳಿಗೇಡಿಯಾದರೂ ಪಂಡಿತನೇ ಆದರೂ,
         ಅನೇನ ಹಿ ವಶೀಕರ್ತುಂ ಸಮರ್ಥೋ ಭವೇತ್=ಸುಭಾಷಿತಗಳಿಂದ  ವಶೀಕರಿಸಲು                                  (ವಿಶ್ವಾಸಗಳಿಸಿಕೊಳ್ಳಲು) ಸಾಧ್ಯ.
         ಮನುಜೈಃ ಸುಭಾಷಿತಸ್ಯ ಸಂಗ್ರಹಃ ಆವಶ್ಯಕಃ ಕರ್ತವ್ಯೋ ಹಿ=ಆದ್ದರಿಂದ ಮನುಷ್ಯರು  ಸುಭಾಷಿತ   ಸಂಗ್ರಹವನ್ನು ಕರ್ತವ್ಯದಂತೆ ಮಾಡಬೇಕು
ದುಃಖಭರಿತ ಮನಸ್ಸು ಕೂಡಾ ಒಳ್ಳೆಯ ಮಾತನ್ನು(ಸುಭಾಷಿತ) ಕೇಳಿ ಮುದಗೊಳ್ಳುತ್ತದೆ.ಬೇರೆಯವರು ಹೇಳಿದ ಸುಭಾಷಿತವನ್ನು ಕೇಳಿ ಮನಸ್ಸು ಮತ್ತೆ ಕೇಳಬೇಕೆಂದು ಹಂಬಲಿಸುತ್ತದೆ.ತಿಳಿಗೇಡಿಯಾದರೂ ಪಂಡಿತನೇ ಆದರೂ ಅವರನ್ನು ಸುಭಾಷಿತಗಳಿಂದ  ವಶೀಕರಿಸಲು (ವಿಶ್ವಾಸಗಳಿಸಿಕೊಳ್ಳಲು) ಸಾಧ್ಯವಿದೆ.ಆದ್ದರಿಂದ ಮನುಷ್ಯರು  ಸುಭಾಷಿತ   ಸಂಗ್ರಹವನ್ನು ಕರ್ತವ್ಯದಂತೆ ಮಾಡಬೇಕು ಎನ್ನುತ್ತಾರೆ..

ಮಂಡಲಗಳು...


ಗುರುಭ್ಯೋ ನಮಃ
ನಮ್ಮಲ್ಲಿ ವಿಶೇಷ ಪೂಜಾದಿಗಳನ್ನು ಮಾಡುವಾಗ ಸಾಮಾನ್ಯವಾಗಿ  ನೆಲದಲ್ಲಿ ಮಂಡಲ ಬರೆದು ಪೂಜಿಸುತ್ತೇವೆ..ಪ್ರತಿ ದೇವತೆಗೂ  ಪುರಾಣಗಳಲ್ಲಿ ಹೇಳಿದಂತೆ ರೂಪವಿರುವುದಿಲ್ಲ..ಒಂದೊಂದು ದೇವತೆಗೂ ಅವರದ್ದೇ ಆದ ಚಿಹ್ನೆಗಳಿಂದ ಪೂಜಿಸುವುದು ಕ್ರಮ.ಆದರೆ ಹೆಚ್ಚಿನ ಜನ ಸಾಮಾನ್ಯರಿಗೆ ಯಾವ ಮಂಡಲ ಯಾವ ದೇವತೆಯದ್ದೆಂದು ಪರಿಚಯವಿರುವುದಿಲ್ಲ.ಅಂಥವರ ಅನುಕೂಲಕ್ಕಾಗಿ ಹಿರಿಯರ ಅಪೇಕ್ಷೆಯ ಮೇರೆಗೆ ನನ್ನ ತಿಳುವಳಿಕೆಯ ಮಿತಿಯಲ್ಲಿ ಮಂಡಲಗಳ ಪರಿಚಯ ಮಾಡಲು ಪ್ರಯತ್ನಿಸುತ್ತೇನೆ..ನಾನು ತಿಳಿಸುವ ಮಂಡಲಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದವರು ಅಭಿಪ್ರಾಯ(comment) ಮೂಲಕ ತಿಳಿಸಬಹುದು..

ಮೊದಲಿಗೆ ನಮ್ಮ ಗುರು ಪರಂಪರೆಯನ್ನೂ,ನಿರ್ವಿಘ್ನತೆಗಾಗಿ ಗಣಪತಿಯನ್ನೂ ಪೂಜಿಸುವುದು ವಾಡಿಕೆ.
    ಇಂದು ಗುರು ಮಂಡಲದ ಬಗ್ಗೆ ತಿಳಿದುಕೊಳ್ಳೋಣ..
ಗುರು ಮಂಡಲಕ್ಕೆ ಉಳಿದ ಮಂಡಲಕ್ಕೆ ಇರುವಂತೆ ಯಾವಿದೇ "ರೀತಿ ಸಂಹಿತೆ"ಯಿಲ್ಲದಿರುವುದರಿಂದ
ಶಿವಳ್ಳಿ,ಕೋಟ,ಕರ್ಹಾಡ,ಚಿತ್ಪಾವನ..ಇತ್ಯಾದಿ ಪಂಗಡದವರು ಯಾವ ಪೂಜೆ,ಹೋಮ ಮಾಡುವುದಿದ್ದರೂ ಎಡ ಬದಿಯಲ್ಲಿ ಚಿತ್ರದಲ್ಲಿ ಬರೆದಂತೆ "ಶ್ರೀಃ" ಅಥವಾ "ಶಂಖ"ದ ಚಿತ್ರ ಬಿಡಿಸಿ ಅದರಲ್ಲಿ ಗುರುಪೂಜೆಯನ್ನು ಮಾಡುತ್ತಾರೆ.
ವಿಷ್ಣು ಎಂದರೆ ಗುರು ಎಂದೂ ವಿಷ್ಣು ವಿಗೆ ಶ್ರೀ ಕಾರ ಇರುವುದರಿಂದಲೂ (ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ) ಶ್ರೀಕಾರದಿಂದ ಗುರುವನ್ನು ಅರ್ಚಿಸುತ್ತಾರೆ, ಅಥವಾ ಕೆಲವರು "ಓಂ" ಕಾರ ಮಂತ್ರಗಳ ಆದ್ಯಕ್ಷರವಾಗಿರುವುದರಿಂದ "ಓಂ" ಕಾರ ಗುರುವಿನ ಮೂಲಮಂತ್ರವಾಗಿರುವುದರಿಂದ,ಶಂಖದ ಮೂಲಕ ಓಂ ಕಾರ ಉಂಟಾಗುವ ಕಾರಣದಿಂದ ಶಂಖದ ಚಿತ್ರ ಬರೆದು ಪೂಜಿಸುವರು.
ನಮ್ಮಲ್ಲಿ ಹೆಚ್ಚಾಗಿ ಮನೆಗಳಲ್ಲಿ ಪೂಜಿಸುವ ಸೂರ್ಯ,ಗಣಪತ್ಯಾದಿ ದೇವತೆಗಳ ಶಿಲೆ,ಪ್ರತಿಮೆಗಳಿದ್ದರೆ..
ಅಲ್ಲಿಗೇ ಹೋಗಿ ಮೊದಲು ಹೂ,ಗಂಧ,ಅಕ್ಷತೆ ಗಳನ್ನು ಅರ್ಪಿಸಲು ಹೇಳುತ್ತಾರೆ. ಗುರುವಿಗೆ ಮಂಡಲ ರಚನೆ ಮಾಡುವ ಸಂದರ್ಭ ಕಡಿಮೆ..
ಚಿತ್ರದಲ್ಲಿ ೩ ನೇ ಅಂಕೆಯಲ್ಲಿರುವುದು ಮಲಯಾಳ ಸಂಪ್ರದಾಯದವರು ಬರೆಯುವ ಶ್ರೀ ಕಾರ..

Wednesday 11 January 2012

ಜಗವಿರುವುದೆ ಹೀಗೆ..


ಜಗವಿರುವುದೆ ಹೀಗೆ..
ಮುಗಿಲಿನ ಮುನಿಸಿನ ಹಾಗೆ..
ನೀರಾಗಿ ಹರಿದರೆ ವರ್ಷಧಾರೆ..
ಜಗವಿರುವುದೆ ಹೀಗೆ..
ಮುಗುದೆಯ ಮನಸಿನ ಹಾಗೆ..
ಕರಗಿ ಹರಿದರೆ ಹರ್ಷಧಾರೆ...

ಜಗವಿರುವುದೆ ಹೀಗೆ..
ಛಲವಾದಿಗೆ
ಹುಸಿಮುನಿಸಿನ ಹಾಗೆ..
ನಿಶ್ಚಲವಾದಿಗೆ
ಹಸಿಮೆಣಸಿನ ಹಾಗೆ..!!

ಜಗವಿರುವುದೆ ಹಾಗೆ..
ನಿತ್ಯವೂ(ತಿಳಿಯುವುದು)
ವೃತ್ತ ಪತ್ರಿಕೆಯಲ್ಲಿರುವಂತೆ..
ಸತ್ಯವೂ(ತಿಳಿಯದುದು)
ರಕ್ತ ಮೃತ್ತಿಕೆಯಲ್ಲಿರುವಂತೆ...

ಜಗವಿರುವುದೆ ಹಾಗೆ..
ನಕ್ಕರೂ ಕಳೆಯದು..
ಕ್ಷಣದಿ ಹಾಗೆ..
ಅತ್ತರೂ ಕರಗದು
ಮನದ ಬೇಗೆ..