Friday 25 May 2012

ಚುಟುಕ "೮೧-೧೦೦"


೮೧."ಶ್ರಮ-ವಿಕ್ರಮ"
ಹಿಡಿದ ಗುರಿ ಸಾಧಿಸು ಉತ್ಸಾಹ ಸಾಯದೇ..
ನಡೆ ಹಿಂದೆ ನೋಡದೇ ಯಶಸ್ಸಿದ್ಧ ಕಾಯದೇ..
ಕೂಡದು ಹಾದಿ ಕ್ರಮಿಸಲು ಕಾಲು ನೋಯದೇ..
ಪಡೆದ ಜಯದಿ ಕಳೆದ ನೋವು ಮಾಯದೇ..?
೮೨."ಗುರು"
ನಡೆವ ಹಾದಿಯೊಳು ಮುಳ್ಳು ತರಚಿದರೂ..
ಗುಡುಗಿ ಮಳೆಗಾಗಿ ಪರರ ನೆಚ್ಚದಿರು..
ಅಡಿಗಡಿಗೆ ಹಿಡಿವ ಹಸ್ತ ಚಾಚಿಗುರು..
ಬಿಡದೆ ಛಲಜಲವ ಕುಡಿದು ಚಿಗುರು..
೮೩."ಪ್ರಾರ್ಥನೆ"
ಹುಟ್ಟುವುದು ಸಾಯುವುದು ಜನರ ಪಾಡು
ದಟ್ಟವಾಯಿತೆ ಪಾರಾಗಲು ಕಷ್ಟ ಕಾಡು..?
ನಷ್ಟಮಾಡದೆ ಭಕ್ತಿ,ಛಲಕೆ ಕಾಪಾಡು
ಕೊಟ್ಟು ಒಳ್ಳೆಯತನವ ಮನದಿ ಕಾಡು
೮೪."ಸ್ವದೇಶಿ"
ಕೋಕಕೋಲ ಪೆಪ್ಸಿ ಸ್ಟ್ರಾಬೆರಿ ಸೇಬು..
ಕೊಕ್ಕೋ ಎಲ್ಲಾ ತಪ್ಸಿ ದುಬಾರಿ ಜೇಬು..
ಬೇಕು ಸ್ವಕೃಷಿಯ ಪೇರಳೆ,ನಿಂಬೂ..
ಸಾಕು ಎಳನೀರು ನೇರಳೆ ಜಂಬೂ..
೮೫."ನಂದನ"
ಬರುತಿರುವ ಏಳಿಗೆಯ ನಂದನ..
ತರುತಿರುವ ಬೆಳಕಿನ ಇಂಧನ
ಸರಿಕರೆವ  ಹೇಳಿ ಅಭಿವಂದನ
ನುರಿತನಿವ ಬಾಳುವೆಯ ಬಂಧನ..
೮೬."ಹೊಸತು"
ಭಾನಿಲ್ಲದೆ ಕತ್ತಲೆಂದು ಕೊರಗದಿರು ಇಂದು..
ಬಾನಲ್ಲಿಯೆ ಸುತ್ತಲಿಗೂ ದಾರಿತೋರುವ "ಇಂದು"
ಬೆನ್ನಲ್ಲಿಯೆ ಮುಕ್ತವಿದು ಹಳೆಕಾಲವು ಸಂದು..
ಬಾ ನಾಳೆಗೆ ಶಕ್ತವಿದು ಕಳೆದಾಯಿತು ಸಂಧು..
೮೭"ಯುಗಾದಿ"
ಬಾ ನಿಲ್ಲದೆ ತುತ್ತುದಿಗೆ ಗುರಿಕಾಣುವ ಗಾದಿ..
ಬಾನೆಲ್ಲೆಗೆ ಹತ್ತಲಿದೇ ಸಿರಿಯಾಗಿ ಯುಗಾದಿ..
ಭಿನ್ನವಾದರೂ ತೊಲಗದಿರು ಸರಿಸಣ್ ಹಾದಿ..
ಬನವಾಸಿ ಹಾರೈಸಿದೆ ಕವಿತೆಯೊಂದ ಹಾಡಿ..
೮೮."ನಿರುಪಯೋಗಿ"
ಮಾನ ಮುಚ್ಚುವುದೆ ನಾಯಿ ಬಾಲಕೆ..?
ನೊಣ ಕಚ್ಚದೇ ತನ್ನ ಹಂಬಲಕೆ..
ಗುಣ ಹೆಚ್ಚಿದರೆ ಶ್ರೇಷ್ಠ ಬಳಕೆ..
ವಿನಾ ನೆಚ್ಚದಿರು ಭ್ರಷ್ಟ ಬಲಕೆ..
೮೯."ಫೇಸ್ ಬುಕ್"
ದಿನವೆಲ್ಲ ದುಡಿದುಂ ಶ್ರಮಕೆ ಮನ ಸಣ್ಣಮುಖೀ..
ಜನರೆಲ್ಲ ಕೂಡಿಡುಂ ವಿಶ್ರಮಕೆ ತಾಣ ಸಂಮುಖೀ..
ಬಣದಲ್ಲಿ ನೋಡಿಯುಂ ರಾಮನಿವ ಸಹ ಸನ್ಮುಖೀ..
ಗುಣದಲ್ಲಿ ಬೇಡಿಯುಂ ವಿರಾಮವೀವ ಹಸನ್ಮುಖೀ..
೯೦."ಬೇಡಿಕೆ"
ದೇವ ನನ್ನ ತನುಮನ ನಿನಗೆ ಶರಣ..
ನೋವ ಮುನ್ನ ಕರಗಿಸಿ ತೋರು ದಿಶಾರುಣ..
ಜೀವ ನಿನ್ನ ಮಾಳ್ಪುದು ನಿತ್ಯ ಅನುಸರಣ..
ಭಾವ ಭಕ್ತಿಗೆ ಸ್ಫುರಿಸು ಶಾಂತಿ ಪ್ರಸರಣ..
೯೧."ಸೀತಾರಮಣ"
ಕಶ್ಮಲವ ಕಳೆದೇವ ಸೀತಾರಮಣ..
ವಿಸ್ಮಯವ್ ಇಳೆಗೆ ನಿನ್ನಾಮದ ಭ್ರಮಣ..
ಭಸ್ಮಿಸಿದೆ  ಕತ್ತರಿಸಿ ಕಳೆದ್ ರಾವಣ..
ಸುಸ್ಮಿತನೆತ್ತು ಅರಿಸಿ ಕೊಳೆ ದ್ರಾವಣ..
೯೨."ರಾಮ"
ಹಾಡಿ ಮಿಡಿಯಲು ನಾಡಿ ರಾಮನ..
ನೋಡಿ ಹಿಡಿಯಲು ಜಾಡು ಗಮನ..
ಕೂಡಿ ನಡೆಯುವೆ  ಕಾಡಿ ಯಮನ..
ಬೇಡಿ ಪಡೆಯುವೆ ಮುಡಿ ಸುಮನ..
೯೩."ನೀತಿ"
ಮೆಟ್ಟಿಲದು ಸಾಧನೆಗೆ ಹಿರಿ,ದೇವರಿಗೆ ನಮನ..
ಕೆಟ್ಟ ಪರ ವೇದನೆಗೆ ಕಾರಣದ ಹಾದಿ ವಮನ..
ದುಷ್ಟಜನ ವ್ಯವಹಾರದ ಮಾರಣ ನೀತಿ ದಮನ..
ಇಷ್ಟವಾಗಿ ಸಜ್ಜನರಿಗೆ ತೋರಣ ಶಾಂತಿ ಶಮನ..
೯೪."ರೀತಿ"
ಗುರಿ ತೋರಲಿ ಸದಾ ಸೇವಿತ ಗುರುಚರಣ
ಗಿರಿಯೆಡೆಗೆ  ಮಾಡಿದಂತೆ  ಸಾಹಸ ಚಾರಣ
ಗರಿಯಂತೆ ಸಜ್ಜನ ಸಾಹಚರ್ಯ  ವಿಚಾರಣ
ಗಾರೆಯಾಗಲಿ ವಿಶ್ವಾಸದ ಸಹಜ ಚೂರಣ
೯೫."ದ್ರೋಹ"
ಕಟ್ಟಿಕೊಳ್ಳಲು ನಾ ಆತ್ಮವಿಶ್ವಾಸದ ಕಟ್ಟೆ..
ಬಿಟ್ಟುಕೊಂಡು ನಿನ್ನ ಬಳಿಗೆ ಕರಗಿ ಕೆಟ್ಟೆ..
ಇಷ್ಟವಾಗಿ ನಿನ್ನ ಬಾಳಿಗೆ ಹೆಗಲು ಕೊಟ್ಟೆ.
ಕಷ್ಟ ಕಾಲದಿ ಬಿಟ್ಟು  ಸುಡುಕೊಳ್ಳಿಯಾಕಿಟ್ಟೆ.?
೯೬."ಮನಸ್ಸು"
ಜಂಜಡದ ಎಡೆಯೊಳಗೆ ಬರಬಾರದು ಸಿಟ್ಟು
ಮಂಜಂತೆ ತಿಳಿ ಬಿಸಿಲಿಗೆ ಮನ ಕರಗಿಸಿಟ್ಟು..
ದುರ್ಜಡತ್ವವು ಕಳಚಿಕೊಳ್ಳಲಿ ಬೆರಗು ಸುಟ್ಟು.
ನಿಜ ನಡತೆಯ ನೆಮ್ಮದಿ ಬಾ ಶುದ್ಧ ಮನಸುಟ್ಟು..(ಮನಸು+ಉಟ್ಟು)
೯೭."ಒಳಿತು"
ದೇವದಾರಿಗೆ ಮೇಲೇರಲು ನೂರಾರು ಬಿಳಲು
ಅವನ ಕೃಪೆ ಒಂದಿರಲು ಆಗದು ಬೀಳಲು..
ಜೀವನದೊಳು ಮರೆತಾಗ ನೋವಿಂದ ಬಳಲು
ಭಾವಕೆ ನಂಬಿಕೆ ಬೆರೆತು ಸವಿಯೇ ಬಾಳಲು..
೯೮."ಮಾತು"
ನೀತಿ ತಪ್ಪಿದರೆ ಆಗುವುದು ತಕರಾರು
ಮಾತಿಗೊಪ್ಪಿದರೆ ನಡೆಯಬೇಕು ಕರಾರು
ನೈತಿಕ ಅಡಿಪಾಯವಿರೆ ಬಿದ್ದವರಾರು..?
ಧೃತಿಯಿಂದ ಮತಿಯೋಡೆ ಗೆಲ್ಲು ಸಾವಿರಾರು..
೯೯."ಕೃಷ್ಣ"
ಕುಸಿದು ಕುಳಿತವಳೆ ತಾಯಿ ಭವಾನಿ..
ಹುಸಿ ಮಾತು ಕೊಟ್ಟೆಯಾ ಅರ್ಜುನ ಭಾವಾ ನೀ..
ಅಸುರ ಗುಣ ಸಂಹರಿಸೆ ಸಂಭವಾಮಿ..
ವಸುಧೆಯೊಳ್ ಅವತರಿಸಲ್ ಭಾವಯಾಮಿ..
೧೦೦."ಅನ್ವೇಷಣೆ.."
ಮನೆಯಲ್ಲಿ ಹುಡುಕಿದೆ..ಗುಡಿಯಲ್ಲಿ ಹುಡುಕಿದೆ..
ಮನದೊಳು ಹುಡುಗಿಯ ರೂಪವದು ಸುಡುತಿದೆ..
ಗೂಗಲೊಳು ತಡಕಿ ಜಗವೆಲ್ಲ ಗುಡಿಸಿದರೂ..
ಜಗಲಿಯದು ಮನೆಯೇ...ಅಮ್ಮನಿಗೆ ಖಾಲಿ..ಖಾಲಿ...:((

Wednesday 23 May 2012

"ಒಂದು ಲೈಸೆನ್ಸಿನ ಕಥೆ"



     ಈ ಕಥೆಯನ್ನು ಓದಿ ಇಷ್ಟೆಯಾ? ಎಂದು ನಕ್ಕುಬಿಡಬೇಡಿ..ಇದು ನನ್ನ ಒಂದು ವರ್ಷದ ಜೀವನದ ಕಥೆ..ಇದರಲ್ಲಿ ನಾನು ಕಲಿತ ಅನೇಕ ಸಂಗತಿಗಳಿವೆ..
       ವಿಷಯ ಏನೆಂದರೆ ಕಳೆದ ವರ್ಷ ಎಪ್ರಿಲ್ ೨೪ ರಂದು ನನ್ನ ಚಿಕ್ಕಮ್ಮನ ಮಗಳು ತಂಗಿಯ ಮದುವೆ ಮಡಿಕೇರಿಯಿಂದ ಸುಮಾರು ೧೩(೧೩-೧೬..?)ಕಿ ಮೀ ದೂರವಿರುವ ಚಟ್ಟಳ್ಳಿಯ ಮಹೇಂದ್ರ ಎಂಬವರೊಂದಿಗೆ  ಜೋಡುಕಲ್ಲಿನ ದುರ್ಗಾಲಯ ಮಂದಿರದಲ್ಲಿ ನಡೆಯಿತು.ಮರುದಿನ ಸಟ್ಟುಮುಡಿ(ವಧೂಗೃಹಪ್ರವೇಶ) ಚಟ್ಟಳ್ಳಿಯಲ್ಲಿ ವರನ ಮನೆಯಲ್ಲಿ ಜರುಗಿತು.ಸಟ್ಟುಮುಡಿಗೆ ಬಸ್ಸುಗಳ ಯಾವುದೋ ಏಜೆಂಟ್ ಮೂಲಕ ಮಾತನಾಡಿ "ಸಾಲ್ಯಾನ್" ಬಸ್ಸನ್ನು ಗೊತ್ತುಮಾಡಿದ್ದರು.೨೫ರ ಬೆಳಗ್ಗೆ ೩.೩೦ ಕ್ಕೆ ಸರಿಯಾಗಿ ವರನ ಮನೆಗೆ ದಿಬ್ಬಣ ಹೊರಡುವುದೆಂದು ತೀರ್ಮಾನಿಸಿದ್ದರು.ಬಸ್ಸು ಹೊರಡಲುದಿಬ್ಬಣಿಗರು ಹತ್ತಿ,ಸರಂಜಾಮು(ಲಗೇಜ್) ತುಂಬಿಸುವಾಗ ಡ್ರೈವರ್ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನೆ ಮಾಡಿದ..ಮಡಿಕೇರಿಯಿಂದ ಸುಮಾರು ೧೩(೧೩-೧೬..?)ಕಿ ಮೀ ದೂರವಿರುವ ಚಟ್ಟಳ್ಳಿಗೆ ಎಂದೆವು."ಓ ಮಡಿಕೇರಿಡ್ದ್ ಲಾ ಅಂಚಿ ಪೋವೊಡಾ?"(ಮಡಿಕೇರಿಯಿಂದಲೂ ಆಚೆ ಹೋಗಬೇಕೆ?) ಎಂದ..ಅವನಿಗೆ ಆ ವಿಷಯ ಗೊತ್ತಿರಲಿಲ್ಲವಂತೆ.
       ಅಂತೂ ಬಸ್ಸು ಹೊರಟಿತು.ಕೆಲವರು ಬಾಳೆಹಣ್ಣು ಸೇವನೆ ಮಾಡಿದೆವು.. ಮಾರ್ಗವಾದರೋ ಹಾವು ಹರಿಯುವಂತೆ ವಕ್ರ ವಕ್ರ..(ಅಲ್ಲಲ್ಲಿ ತುಂಡ ತುಂಡ..!!) ವಕ್ರ ಮಾರ್ಗದಲ್ಲಿ ಪಯಣಿಸುವಾಗ ನಮ್ಮಲ್ಲಿ ಹೆಚ್ಚಿನವರಿಗೆ ವಾಂತಿ ಮಾಡುವ ಅಭ್ಯಾಸವಿದೆ.. ನಿದ್ದೆಗೆಟ್ಟು ಸುದರಿಕೆ ಮಾಡಿದ್ದೆವು ಕೂಡಾ..ಹಾಗೆ ಅಲ್ಲಲ್ಲೇ ಅಡ್ಡಾದೆವು..ಕೆಲವರು ಬಸ್ಸೊಳಗೇ "ಕಾರು"ಬಾರು ಮಾಡಿದರು..೮.೦೦ ರ ಸುಮಾರಿಗೆ ಚಟ್ಟಳ್ಳಿಗೆ ತಲುಪಿದೆವು. ಎಲ್ಲರೂ ಕ್ಷೇಮವಿಲ್ಲದೇ ಬಂದರೂ..ಸ್ವಾಗತದಲ್ಲಿ ಮಾತ್ರ ಕ್ಷೇಮವಾಗಿ ಬಂದೆವೆಂದು ಹೇಳಿದೆವು..! ಎಲ್ಲರಿಗೂ ಯಥಾ ಶಕ್ತಿ ಇಡ್ಲಿ,ವಡೆ,ಶುಗರ್ ಲೆಸ್ (ಚಾ,ಕಾಪಿ,ಕಷಾಯ),ಶುಗರ್ ಪ್ಲಸ್ (ಚಾ,ಕಾಪಿ,ಕಷಾಯ), ಸೇವನೆಯಾಯಿತು..ಕಾರ್ಯಕ್ರಮ ಬಂಧಿತರು,
ಸಂಬಂಧಿತರು,ಅದರಲ್ಲಿ ತೊಡಗಿಕೊಂಡರು.ನಾವೆಲ್ಲಾ(ಸೌಂದರ್ಯ ಪ್ರಜ್ಞೆ ಉಳ್ಳವರು) ಮಡಿಕೇರಿಯ ಸೌಂದರ್ಯ ಆಸ್ವಾದನೆ ಮಾಡಲು ಹೊರಟೆವು..:)..(ಎಲ್ಲಿಗೂ ಹೋಗಲಿಲ್ಲಾ ಮತ್ತೇ..ಅಲ್ಲೇ ಎಸ್ಟೇಟ್ ಒಳಗೇ ತಿರುಗಾಡಿದ್ದಷ್ಟೇ..ಮದುವೆ ಮನೆಯಲ್ಲೂ ಸೌಂದರ್ಯ ಇರುತ್ತಲ್ಲಾ..ಅದೂ ಮಿಸ್ ಆಗಬಾರದಲ್ಲಾ..!!)ಮತ್ತೆ ಊಟ ಎಲ್ಲಾ ಮುಗಿಸಿ ಲಗು ಬಗೆಯಿಂದ(ಬಗೆಬಗೆಯಿಂದ..!) ಬಸ್ಸೇರಿದೆವು..
      ಬಸ್ಸು ಮಡಿಕೇರಿಗೆ ತಲುಪಿದಾಗ ಆರ್.ಟಿ.ಓ ಪೋಲಿಸ್ ಬಸ್ಸನ್ನು ನಿಲ್ಲಿಸಿ ದಾಖಲೆ,ಅನುಮತಿ ಪತ್ರವನ್ನು ಕೇಳಿದರು..ಡ್ರೈವರ್ ನಲ್ಲಿ ದಾಖಲೆ ಬಿಡಿ..ಲೈಸೆನ್ಸ್ ಕೂಡಾ ಇರಲಿಲ್ಲ..! ಅನುಮತಿ ಪತ್ರವನ್ನು ಕೊಟ್ಟಾಗ ಇದಲ್ಲ ಎಂದರು(ಆಗ ಸಂಪಾಜೆ,ಮಡಿಕೇರಿ ಮಾರ್ಗ ದುರಸ್ತಿಯ ನಿಮಿತ್ತ ಮುಚ್ಚಿದ್ದರು..ಯಾರಾದರೂ ಹೋಗ ಬೇಕಿದ್ದರೆ ವಿಶೇಷ ಅನುಮತಿ ಪತ್ರವನ್ನು ಪಡೆಯಬೇಕಿತ್ತು.ನಾವು ಕೊಟ್ಟದ್ದು ಆ ಅನುಮತಿಪತ್ರ..ಆದರೆ ಆ ಬಸ್ಸು ಮಡಿಕೇರಿ-ಕಾಸರಗೋಡು ನಿತ್ಯ ಪ್ರಯಾಣದ ಬಸ್ಸು..ಅದಕ್ಕೆ ಮಡಿಕೇರಿಯಿಂದಾಚೆ ಅನುಮತಿಯಿರಲಿಲ್ಲ) ಪೋಲೀಸಿನವರು ಬಸ್ಸನ್ನು ಬಿಡಬೇಕಿದ್ದರೆ ಯಾವುದಾರೂ ಲೈಸೆನ್ಸ್ ಕೊಡಿ..ಆ ಮೇಲೆ ಬಸ್ಸಿನ ದಂಡ(ಫೈನ್)ಕಟ್ಟಿ ಲೈಸೆನ್ಸ್ ಬಿಡಿಸಿಕೊಳ್ಳಿ ಎಂದರು..ಹೇಗಿದ್ದರೂ ಎರಡುದಿನದಲ್ಲಿ ಲೈಸೆನ್ಸ್ ಬಿಡಿಸಿಕೊಡುವ ಆಶ್ವಾಸನೆ ಸಿಕ್ಕಿದ್ದರಿಂದ ನಾನು ಪರೋಪಕಾರದ ದೃಷ್ಟಿಯಿಂದ  ನನ್ನ ಬೈಕಿನ ಲೈಸೆನ್ಸ್ ಕೊಟ್ಟೆ..!! ಅಂತೂ ಬಸ್ಸು ಹೊರಟಿತು..ರಾತ್ರೆ ೯.೦೦ಕ್ಕೆ ಊರಿಗೆ ತಲುಪಿದೆವು..ಡ್ರೈವರ್ ಹಣವನ್ನು ಪೂರ್ತಿ ಕೊಡಬೇಕೆಂದರೂ ಲೈಸೆನ್ಸ್ ಕೊಡಬೇಕಾದ ಬದ್ಧತೆಗಾಗಿ ೨.೦೦೦ ರೂಗಳನ್ನು ಬಾಕಿ ಮಾಡಿ ಉಳಿದ ಹಣವನ್ನು ಕೊಟ್ಟೆವು..
     ಅದೇ ಕೊನೆ...ಆಮೇಲೆ ೫೦ ರಿಂದ ನೂರು ಕಾಲ್ ಗಳನ್ನು ಮಾಡಿದರೂ ಏಜೆಂಟ್ ನಿಂದಾಗಲೀ ಡ್ರೈವರ್ ನಿಂದಾಗಲೀ ಉತ್ತರವಿಲ್ಲ..ಲೈಸೆನ್ಸ್ ಮರಳಿಬರುವುದೆಂದು ವಾರ ಉರುಳಿ ತಿಂಗಳಾಯಿತು..ಎರಡಾಯಿತು ಮೂರಾಯಿತು ಸುದ್ದಿಯಿಲ್ಲ.. ನಮ್ಮ ಕೇರಳದಲ್ಲಾದರೋ ಬಹಳ ಕಟ್ಟುನಿಟ್ಟು.. ಒಂದೆರಡು ವಾರಕ್ಕೊಮ್ಮೆಯಾದರೂ ನಾನು ಹೋಗುವ ದಾರಿಯಲ್ಲಿ ತಪಾಸಣೆ(ಚೆಕಿಂಗ್) ಇರುತ್ತದೆ..ಲೈಸೆನ್ಸ್ ಇಲ್ಲದ ಕಥೆಯನ್ನು  ನನ್ನಿಂದ ಕೇಳಿಸಿಕೊಂಡವರೆಲ್ಲಾ ನಕ್ಕಿದ್ದೂ ಅಲ್ಲದೆ."ನೀನಲ್ಲದೆ ಯಾರಾದರೂ ಲೈಸೆನ್ಸ್ ಕೊಡುವರೇ?"ಕಿವಿಮಾತನ್ನೂ ಹೇಳಿದವರೆಷ್ಟೋ..ಹೊರತು..ಮರಳಿಪಡೆಯಲು ಸಹಾಯ,ಅಥವಾ ದಾರಿಯನ್ನು ಹೇಳಿಕೊಡಲಿಲ್ಲ..ಅಂತೂ ಒಬ್ಬ ಹಿತೈಷಿ..ಹೇಗೂ ೨,೦೦೦ ರೂ ಬಾಕಿ ಇದೆಯಲ್ಲಾ. ಅದರಲ್ಲಿ ನೀನು ಕೇರಳದ ಲೈಸೆನ್ಸ್ ಮಾಡಿಸಿಕೊ ಎಂದರು(ಈ ಮೊದಲು ಇದ್ದದ್ದು ಕರ್ನಾಟಕದ ಲೈಸೆನ್ಸ್) ಹಾಗೆ ಕಾಸರಗೋಡಿಗೆ ಆರ್,ಟಿ,ಓ ಆಫೀಸಿಗೆ ಹೊಗಿ ಲೈಸೆನ್ಸಿಗಾಗಿ ಅರ್ಜಿ(ಅಪ್ಲಿಕೇಶನ್) ಕೇಳಿದರೆ ಆನ್ ಲೈನಿನಲ್ಲಿ ಅರ್ಜಿ ಗುರಾಯಿಸಬೇಕೆಂದರು..ನಾನು ಕೇರಳದಲ್ಲೇ ಹುಟ್ಟಿದ್ದರೂ..ಕಛೇರಿಗಳ ಅಧಿಕಾರಿಗಳೊಂದಿಗೆ  ಮಲಯಾಳಮ್ ಮಾತನಾಡಲು ಕಷ್ಟವಾಗುತ್ತದೆ.ಆನ್ ಲೈನಿನಲ್ಲಿ ಅರ್ಜಿ ಗುರಾಯಿಸಲು ಅನೇಕ ಕಂಪ್ಯೂಟರ್ ಸೆಂಟರ್ಗಳಲ್ಲಿನವರಿಗೇ ಗೊತ್ತಿಲ್ಲ..!ಅದಕ್ಕೆ ಮತ್ತೆ,ರಕ್ತದ ಗುಂಪಿನ ಪ್ರಮಾಣ ಪತ್ರವಂತೆ,ಕಣ್ಣಿನ ಆರೋಗ್ಯದ ಪ್ರಮಾಣಪತ್ರವಂತೆ,
      ಈ ರಕ್ತದ ಪ್ರಮಾಣ ಪತ್ರದ್ದೇ ಒಂದು ಕಥೆ..! ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಬಯೋಲಜಿ ಯ ಲ್ಯಾಬ್ ನಲ್ಲಿ ಬ್ಲಡ್ ಗ್ರೂಪ್ ಟೆಸ್ಟಿಂಗ್ ಕೂಡಾ ಇತ್ತು.ಅಲ್ಲಿ ಸರ್ ನೆದುರು ಟೆಸ್ಟ್ ಮಾಡಿ ಬಿ ನೆಗೆಟಿವ್ ಎಂದು ಬಂದಿತ್ತು..ಮುಜುಂಗಾವಿನಲ್ಲಿ ಗುರುಗಳು "ಸಾವಿರದ ಸಾವಿರ" ಎಂಬ ಹೆಸರಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದಾಗ ನಾನೂ ಭಾಗವಹಿಸಿದ್ದೆ..ಆದರೆ ಆಗ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ನನ್ನರಕ್ತ ಪರೀಕ್ಷೆ ಮಾಡಿ ಬಿ ಪೊಸಿಟಿವ್ ಎಂದಿದ್ದರು..ನನಗೆ ಆಶ್ಚರ್ಯವಾಗಿ ಪುನಃ ಕೇಳಿದಾಗ ಬಿ ಪೊಸಿಟಿವ್ ಎಂಬುದೇ ಸರಿ ಎಂದರು..ಸರಿ.. ಅದನ್ನೇ ಗಟ್ಟಿಯಾಗಿ ನಂಬಿ ಬೈಕ್ ನ ಮೇಲೆ,ನನ್ನ ಹೆಸರಿನೆದುರು ಎಲ್ಲಾ, ಬಿ+(ಎಂದರೆ ಯಾವತ್ತೂ ಧನಾತ್ಮಕವಾಗಿರಿ) ಎಂದು ಬರೆದೆ:). ಲೈಸೆನ್ಸ್ ಅರ್ಜಿಯಲ್ಲಿ ಬ್ಲಡ್ ಗ್ರೂಪ್ ಬಿ+ ಎಂದು ಬರೆದು ಅದನ್ನು ಅಧಿಕಾರಿಗೆ ನೀಡಿದೆ. ಅವರು ಇದರಲ್ಲಿ ಬರೆದರೆ ಸಾಲದು..ಪ್ರತ್ಯೇಕ ಸರ್ಟಿಫಿಕೇಟ್ ನೀಡಬೇಕೆಂದರು..ಥತ್..ಮತ್ತೆ ಕೆಲಸವಾಯ್ತಲ್ಲಾ ಎಂದು ಚಿಂತಿಸಿ..ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿದೆ ಅಲ್ಲಿ ನೋಡಿದರೆ ಎ+ ಎಂದು ಪ್ರಮಾಣಪತ್ರ ನೀಡಿದರು. ನನಗೆ ತಲೆ ತಿರುಗುವುದೊಂದು ಬಾಕಿ..!!ಪುನಃ ಡಾಕ್ಟ್ರಲ್ಲಿಗೆ ಹೋಗಿ ಕೇಳಿ ಪರೀಕ್ಷೆ ಮಾಡಿಸಿದೆ ಅಲ್ಲೂ ಎ+ ಎಂದು ಫಲಿತಾಂಶ ಬಂತು ಅದನ್ನು ಆರ್,ಟಿ ಓ ಕಛೇರಿಗೆ ನೀಡಿದೆ..ಮೂರು ಬಾರಿ ರಕ್ತದ ಗುಂಪು ಬದಲಿದೆ.ಇನ್ನೂ ಬದಲುವುದಿದೆಯೇ ಎಂದು ದೇವರೇ ಹೇಳಬೇಕು..!
(ರಕ್ತ ಪರೀಕ್ಷೆ ಸರಿಯಾಗಿ ಮಾಡದಿದ್ದರೆ ಹೀಗೆಯೇ ಆಗುವುದು)
      ಆಮೇಲೆ ಕಣ್ಣಿನ ಪರೀಕ್ಷೆಯಾಗಿ ಅದೂ ನಾರ್ಮಲ್ ಎಂದು ಉತ್ತರ ಬಂತು.ಡಾಕ್ಟರ್ "ಕಾಯ್ಚ ಶರಿ ಉಂಡೋ..?" ಎಂದದ್ದು ಅರ್ಥವಾಗದೆ ಗಲಿಬಿಲಿಯಾಯಿತು..ಮತ್ತೆ ತಿಳಿಯಿತು ಆಕೆ ಎಂದದ್ದು.."ದೃಷ್ಟಿ ಸರಿ ಇದೆಯೋ...?" ಎಂದು..!!
      ಕೊನೆಗೆ ಅಂತೂ ಇಂತೂ ಎಲ್,ಎಲ್,ಆರ್ ಪರೀಕ್ಷೆ ಬರೆದು ಪಾಸ್ ಆದೆ.. ಇನ್ನು ಆರು ತಿಂಗಳು ವಾಯಿದೆ,ಅಷ್ಟರೊಳಗೆ ಲೈಸೆನ್ಸ್ ಮಾಡಬೇಕು... ಟು ವ್ಹೀಲರ್ ನನಗೆ ಹೇಗೂ ಅಭ್ಯಾಸವಿದ್ದುದರಿಂದ (ಹಾಗೆಂದು ನನಗೆ ಕರ್ನಾಟಕದ ಲೈಸೆನ್ಸ್ ಇದೆಯೆಂಬ ಸಂಗತಿಯಾಗಲೀ, ಟು ವ್ಹೀಲರ್ ರೈಡಿಂಗ್ ಅಭ್ಯಾಸವಿದೆಯೆಂದಾಗಲೀ ಹೇಳಲಿಲ್ಲ..! ಹೇಳಿದರೆ ಇಷ್ಟು ಸಮಯ ಲೈಸೆನ್ಸ್ ಇಲ್ಲದೆ ಹೇಗೆ ಗಾಡಿ ಓಡಿಸಿದ್ದೆಂಬ ಪ್ರಶ್ನೆ.ಅಮೇಲೆ ಪ್ರಶ್ನೆಯ ಮೇಲೆ ಪ್ರಶ್ನೆ ಬೆಳೆದು ಅದೇ ದೊಡ್ಡ ಮಲಯಾಳಿಗಳ "ಪ್ರಶ್ಣೆ" ಯಾಗ ಬಹುದು..!!) ನಾನು ವಾರದೊಳಗೆ ಮಾಡಲಿಕ್ಕಾಗುತ್ತದೋ ಎಂದು ಕೇಳಿದಾಗ ಮಿನಿಮಮ್ ಒಂದು ತಿಂಗಳು ಕಾಯಬೇಕೆಂದರು..
     ಇತ್ತ ಕರ್ನಾಟಕದ ಲೈಸೆನ್ಸ್ ಮರಳಿ ಪಡೆಯಲು ಪ್ರಯತ್ನ ಆಗುತ್ತಲೇ ಇತ್ತು..ಏಜೆಂಟ್ ಗಳಿಗೆ ಫೋನ್ ಮಾಡುವುದು ಬೈಯುವುದು..ಫಲಿತಾಂಶ ಮಾತ್ರ ಶೂನ್ಯ..:(
      ಒಂದು ತಿಂಗಳಿನ ನಂತರ ಕೊಟ್ಟ ತಾರೀಖಿನಂದು ಟೆಸ್ಟ್ ಕೊಡಲು ಹೋದೆ. ನನ್ನದು ಕರ್ನಾಟಕದ ರಿಜಿಸ್ಟ್ರೇಷನ್  ಬೈಕ್.ಕೇರಳದ ವಾಹನದಲ್ಲೇ ಟೆಸ್ಟ್ ಕೊಡಬೇಕಂತೆ..ಅದೂ ಟೆಸ್ಟ್ ಎಂದರೆ  ಕೇವಲ "ಎಂಟು೦೦" ಆಕೃತಿಯಲ್ಲಿ ಬರೆದರೆ ಸಾಲದು..! "೦೦೦"ಎಂಬ ಆಕೃತಿಯಲ್ಲಿ ಬರೆಯಬೇಕು..!ಬಹುಷಃ ನನ್ನ ಕಣ್ಣಳತೆಯಲ್ಲಿ ಹೇಳುವುದಿದ್ದರೆ ಅದರ ಒಟ್ಟು ಉದ್ದಗಲ ೩><೧೦ ಮೀಟರ್ ಅಳತೆಯಿರಬಹುದಷ್ಟೇ..! ಮತ್ತೆ  ಅಲ್ಲಿಗೆ ಟೆಸ್ಟ್ ಕೊಡಲು ಬಂದಿದ್ದ ಡ್ರೈವಿಂಗ್ ಸ್ಕೂಲ್ ಏಜೆಂಟ್ ಅನ್ನು ಮಾತಾಡಿಸಿ ೨೫೦ ರೂಪಾಯಿಗೆ ಟೆಸ್ಟ್ ಗಾಗಿ ಅವರ ಎಂ.ಎಯ್ಟಿ ಕೊಡಲು ಒಪ್ಪಿಸಿದೆ.(ಇಷ್ಟೆಲ್ಲಾ ಟೆಸ್ಟ್ ಪಾಸಾದರೂ  ಪರ್ ಪರ್ಸನ್ ೨೫೦ ರುಪಾಯಿ ಲಂಚ ಕೊಡಬೇಕಂತೆ..! ಬೆಳಿಗ್ಗೆ ಅಲ್ಲಿ ಟ್ರ್ಯಾಕ್ ಹಾಕಿರುತ್ತಾರೆ. ಅದರಲ್ಲಿ ನನ್ನ ಬೈಕ್ ನಲ್ಲಿ ಟ್ರ್ಯಾಲ್ ಪಾಸಾದ್ದೂ ಆಯಿತು.ಎಮ್.ಎಯ್ಟಿಯಲ್ಲೂ ಆಯಿತು..ಆದರೆ ಆರ್.ಟಿ ಓ ಎದುರು ಟೆಸ್ಟ್ನಲ್ಲಿ ಫೇಲ್..!!ಮಧ್ಯದಲ್ಲಿ ಕಾಲು ಕೊಟ್ಟೆ..ಇನ್ನು ಒಂದು ತಿಂಗಳು ಕಳೆದು ಪುನಃ ಪರೀಕ್ಷೆ..!!
    ಮಧ್ಯೆ ಅನೇಕ ಕಾರ್ಯಕ್ರಮಗಳು..ಅವುಗಳೆಡೆಯಲ್ಲಿ ಹೋಗಲಿಕ್ಕಾಗದೇ.ಒಂದೆರಡುಬಾರಿ ಟೆಸ್ಟ್ ಡೇಟ್ ಬದಲಿಸಿದ್ದೂ ಆಯಿತು.ಕೊನೆಗೆ ಜನವರಿಯ ಮೊದಲು ಇದ್ದ ಕಾರ್ಯಕ್ರಮಕ್ಕೆ ಬದಲೀ ವ್ಯವಸ್ಥೆ ಮಾಡಿ ಟೆಸ್ಟ್ ಕೊಡಲು ಹೋದೆ.ಈಗ ವಾರದಲ್ಲೇ ಟೆಸ್ಟ್ ಕೊಡಬಲ್ಲೆನೆಂಬ ಹಮ್ಮು ಇಳಿದು ಹೋಗಿತ್ತು..!ಅಲ್ಲಾದರೂ ಟೆಸ್ಟ್ ಪಾಸಾಗಬಹುದೆಂದು ಆಸೆಯಿಂದ ಹೋದೆ.ಟೆಸ್ಟ್ ಕೊಡುವ ಜಾಗವನ್ನು ಬೇರೆಲ್ಲೋ ಬದಲಿಸಿದ್ದರು ಅದನ್ನು ಹುಡುಕಿ ಅಲ್ಲಿಗೆ ತಲುಪುವಾಗಲೇ ತಡವಾಗಿತ್ತು.ಹಾಗಾಗಿ ಟ್ರ್ಯಾಲ್ ತೆಗೆಯಲು ಆಗಿರಲಿಲ್ಲ..ನೇರವಾಗಿ ಟೆಸ್ಟ್ ಕೊಡಬೇಕಿತ್ತು. ಅದೂ ಅಲ್ಲದೆ ನನಗೆ ಪರಿಚಯವಿರುವ ಒಂದೆರಡು ಹುಡುಗಿಯರೂ ಅಲ್ಲಿಗೆ ಬಂದಿದ್ದರು ಅವರೆಲ್ಲಾ ಒಂದೇ ಬಾರಿ ಟೆಸ್ಟ್ ಪಾಸಾದರು..! ನನಗೆ ನರ್ವಸ್ನೆಸ್ ಕೂಡಾ ಆಯಿತು..! ಈಬಾರಿ ಮೊದಲಿನಂತಾಗಲಿಲ್ಲ..ಎಲ್ಲ ಸರಿಯಾಗಿ ಟ್ರ್ಯಾಕ್ ನಿಂದ ಹೊರ ಬರುವಾಗ ಕೊನೆಯ ಒಂದು ಕಂಬಿ ಬೀಳಿಸಿದೆ..!! ಪುನಃ ಫೇಲ್..!! ಈಬಾರಿಯಂತೂ ಆದ ನಿರಾಸೆ,ಹತಾಶೆ,ಬೇಸರ,ಅವಮಾನ ಅಷ್ಟಿಷ್ಟಲ್ಲ.. :(( ನೇರವಾಗಿ ಮನೆಗೆ ಬಂದು ಅಮ್ಮನಲ್ಲಿ ಫೇಲ್ ಎಂದು ಹೇಳಿದೆ..
         ಆದರೆ ಯಾವ ನಿರಾಶೆಯಿದ್ದರೂ ಹೆಚ್ಚೆಂದರೆ ಒಂದು ದಿನ. ಆಮೇಲೆ ಹೇಗಾದರೂ ಸರಿ ಕರ್ನಾಟಕದ ನನ್ನ ಕಳೆದ ಲೈಸೆನ್ಸ್ ಅನ್ನೇ ಪಡೆಯುವುದೆಂದು ತೀರ್ಮಾನಿಸಿ..ಮಡಿಕೇರಿಯ ಆರ್,ಟಿ,ಓ ಆಫೀಸ್ ಗೆ ಹೋಗಿ ಈ ಕುರಿತು ವಿವರಿಸಿ.. ವಿವರ ಕೇಳಿದಾಗ..ಅದನ್ನು ಆ ಬಸ್ಸಿನ ಮಾಲೀಕರು ದಂಡ ಪಾವತಿಸಿ ತೆಗೆದುಕೊಂಡು ಹೋಗಿದ್ದಾರೆಂದು ಹೇಳಿದರು..ನಾನು ನೇರವಾಗಿ ಆ ಮಾಲೀಕರ  ಮೊಬೈಲ್ ನಂಬ್ರವನ್ನು ತೆಗೆದುಕೊಂಡು ಈಕುರಿತು ವಿಚಾರಿಸಿದಾಗ ಓತಪ್ರೋತವಾಗಿ ನನ್ನನ್ನು ಬೈಯಲಾರಂಭಿಸಿದರು.. "ನಿಮಗೆ ನಮ್ಮ ಕಷ್ಟವೇನು ಗೊತ್ತು? ೪೫೦೦೦ ರೂ ದಂಡ ಪಾವತಿಸ ಬೇಕಾಯಿತು..ನಿಮ್ಮ ಲೈಸೆನ್ಸ್ ಬಂದಿದೆಯೆಂದು ನಾವು ತಿಳಿಸಿ ಹೆಳಬೇಕಾ? ನಿಮಗೆ ಅಷ್ಟೂ ಜವಾಬ್ದಾರಿಯಿಲ್ಲವೇ,,? ನಮ್ಮ ಬಸ್ಸಿಗೊದಗಿದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತಿದ್ದೆವು.. ನೀವೇಕೆ ಲೈಸೆನ್ಸ್ ಕೊಟ್ಟಿರಿ..?" ಎಂದು   ನಾನೂ ಬೈಯಬಹುದಿತ್ತು..ಏಕೆಂದರೆನನಗೂ ಇದರಿಂದ ಸಾಕಷ್ಟು ಹಾನಿಯಾಗಿತ್ತು.. ಆದರೆ ಅದರಿಂದ ನನಗೇ ಹಾನಿಯೆಂದು ತಿಳಿದು  ಅವರ ಆಫೀಸಿನ ಜಾಗವನ್ನು ವಿಚಾರಿಸಿದೆ.ಆಮೇಲೆ ಒಂದು ದಿನ ಆಫೀಸಿಗೆ ಹೋದಾಗ ಮನೆಯಲ್ಲಿದ್ದಾರೆಂದು ತಿಳಿಯಿತು.ಅವರ ಮನೆ ಅಲ್ಲೇ ಹತ್ತಿರದಲ್ಲಿ ಎಂದು ತಿಳಿದು ಅಲ್ಲಿಗೇ ಹೋದೆ...ಮನದಲ್ಲಿ ಮಾತ್ರ ಫುಕುಫುಕು ಹೆದರಿಕೆ...!! ಎಲ್ಲಿಯಾದರೂ ಈ ಮನುಷ್ಯ ಬೈದರೆ..? ನನಗೆ  ಹಾಗೆಲ್ಲಾ ಬೈಸಿಕೊಂಡು ಅಭ್ಯಾಸವಿಲ್ಲ..ಅದರಲ್ಲೂ ಸಾರ್ವಜನಿಕವಾಗಿ ಬೈದರೆ..? ಯಾಕೆ ಬೈಯುತ್ತಾರೆಂದು ಕೇಳಬೇಡಿ..ಹಣ ನಷ್ಟವಾದವರು ಎಲ್ಲರೂ ನಮ್ಮಂತೆ ಇರುವುದಿಲ್ಲ.. ಕಾರಣವಿಲ್ಲದೇ ಯಾವಾಗ ಯಾರ ಮೇಲೆ ಬೇಕಾದರೂ ರೇಗಾಡಬಹುದು. ನಾನು ಅವರ ಮನೆಗೆ ಹೋಗಿ ಪರಿಚಯ ತಿಳಿಸಿ "ಮದುವೆಯಲ್ಲಿ ಎಲ್ಲರೊಂದಿಗೆ ಹೋದವರಲ್ಲಿ ನಾನೂ ಒಬ್ಬನೇ ಹೊರತು ಇದರ ಮುಖ್ಯ ವ್ಯಕ್ತಿ ನಾನಲ್ಲ ಎಂದು ತಿಳಿಸಿದೆ. ಅವರ ಕೋಪ ತಣ್ಣಗಾಗಿತ್ತೆನಿಸುತ್ತದೆ."ಮೊನ್ನೆ ಕಾಲ್ ಮಾಡಿದ್ದಾಗ ನೀವೇ ಅ ಮದುವೆಯ ಪಾರ್ಟಿಯ ವ್ಯಕ್ತಿಯೆಂದು ನಾನು ತಿಳಿದು ಬೈದದ್ದೆಂದು ಹೇಳಿ ನೇರವಾಗಿ ಒಳ ಹೋಗಿ ಲೈಸೆನ್ಸ್ ತಂದು ಕೊಟ್ಟರು..!!!
 ನನಗೆ ಆದ ಸಂತೋಷ ಅಷ್ಟಿಷ್ಟಲ್ಲ ಕೇರಳದ ಟೆಸ್ಟ್ ನಲ್ಲಿ ಆದ ನಿರಾಸೆ,ಹತಾಶೆ,ಬೇಸರ,ಅವಮಾನ  ಎಲ್ಲಾ ಈ ಸಂತೋಷದ  ಎರಡು ಕಣ್ಣ ಹನಿಯಲ್ಲಿ ತೊಳೆದು ಹೋಯಿತು.. ಬದುಕಿದೆಯಾ ಬಡಜೀವವೇ ಎಂದೆ. ಆಮೇಲೆ ಅವರಲ್ಲಿ ಆದ ಕಾರಣ ವಿವರಿಸಿ ಅವರು ನನಗೆ ಲೈಸೆನ್ಸ್ ಕೊಟ್ಟಿದ್ದಕ್ಕಾಗಿ ಧನ್ಯವಾದವನ್ನೂ,ನಾನು ಆರ್.ಟಿ ಓ.ಗೆ ಕೊಟ್ಟಿದ್ದಕ್ಕಾಗಿ ಸಂತಾಪವನ್ನೂ(ಕ್ಷಮೆ ಕೇಳಲಿಲ್ಲ ಏಕೆಂದರೆ ನಾನು ತಪ್ಪು ಮಾಡಿರಲಿಲ್ಲವೆಂದು ನನ್ನ ಭಾವನೆ..) ತಿಳಿಸಿ ಹೊರಟೆ...
     ಈ ಒಂದು ವರ್ಷದಲ್ಲಿ  ನಿತ್ಯ ರುದ್ರ ಜಪ ಪಠನ ಮಾಡುತ್ತಿದ್ದೆ.ಏಕೆಂದರೆ (ನೀವು ನಂಬುತ್ತೀರೋ ಬಿಡುತ್ತೀರೋ)ಜ್ಯೋತಿಷ್ಯ ಪ್ರಕಾರ ನನಗೆ ರವಿ ದಶಾ..ನನ್ನ ಜಾತಕದಲ್ಲಿ ರವಿ ಒಳ್ಳೆಯ ಸ್ಥಾನದಲ್ಲಿಲ್ಲಿದ ಕಾರಣ ರವಿಯೆಂದರೆ ಆರೋಗ್ಯ,ಸರ್ಕಾರಿ ವಿಷಯಗಳಿಗೆ ಕಾರಕತ್ವವಿರುವ ಕಾರಣ ನನಗೆ ಆರೋಗ್ಯದ ಸಮಸ್ಯೆಯಿಲ್ಲವಾದರೂ. ಸರ್ಕಾರಿ ಸಮಸ್ಯೆಯೊಂದು ಭೂತಾಕಾರವಾಗಿ ಕಾಡಿತು..  ಈ ಒಂದು ವರ್ಷದಲ್ಲಿ ಅನೇಕ ಬಾರಿ ಚೆಕಿಂಗ್ ಮೂಲಕ ಹೋಗಿದ್ದೇನೆ ಯಾವತ್ತೂ ನನ್ನ ಮುಂದಿನವರನ್ನು,ಹಿಂದಿನವರನ್ನು ನಿಲ್ಲಿಸಿ ಚೆಕ್ ಮಾಡಿದ್ದರಾಗಲೀ ನನ್ನನ್ನು ಒಮ್ಮೆಯೂ ನಿಲ್ಲಿಸಲಿಲ್ಲ..!! ನಾವು ಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿದರೆ ನಮ್ಮ ಕಷ್ಟ ಕಾಲದಲ್ಲಿ ಯಾವತ್ತೂ ಅವನು ಕಾಪಾಡುತ್ತಾನೆಯೆಂಬುದು ನನಗೆ ಪ್ರತ್ಯಕ್ಷವಾಗಿ ಅನುಭವವಾಯಿತು.ಹಾಗಾಗಿ ಜಾತಕದಲ್ಲಿ ದೋಷವಿದೆಯೆಂದು ಹೆದರ ಬೇಕಾದ್ದಿಲ್ಲ.ನಮ್ಮ ಕಷ್ಟಗಳಿಗೂ,ಸುಖಕ್ಕೂ ನಾವೇ ಉತ್ತರದಾಯಿಗಳು.ಸಮಸ್ಯೆ ಮುಗಿದರೂ ನಿತ್ಯ ಹೈವೇ ಯಲ್ಲಿ ಪಯಣ, ದಿನಕ್ಕೊಂದು ಅಪಘಾತ ಕಾಣುವಾಗ ನಮ್ಮ ಸುರಕ್ಷತೆಗಾಗಿ ದೇವರ ಸ್ಮರಣೆಯೇ ನಮ್ಮ ರಕ್ಷಾ ಕವಚ. ಹಾಗಾಗಿ ರುದ್ರಪಠಣ ನಿತ್ಯ ನಡೆಯುತ್ತಿದೆ. ಯಾಕೆಂದರೆ  ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ..?ಅವನಲ್ಲವೇ ಕಾಯವವನು..?:)
      ನಿಮ್ಮ ಅನಿಸಿಕೆ ಏನು..?

ಚುಟುಕ "೭೧-೮೦"


೭೧."ಸಾಧನೆ"
ಕರೆಯುತಿದೆ ನಿನಗಾಗಿ ಸಾಧಿಸಲು ಜಗದಂಗಳ..
ಅರಿಯುತಿರೆ ಹೊಸದಾಗಿ ಬಾಧಿಸುವುದು ನಿನ ಕಂಗಳ..
ಸುರಿಯುತಿರೆ ಶ್ರಮವೆಲ್ಲ ಯಶವಾದಂತೆ ಬೆಳದಿಂಗಳ..
ಸಿರಿಯ ತೊರೆ ಕ್ರಮದಲ್ಲಿ ವಶವಾದಂತೆ ಮಂಗಳ...
೭೨."ವಿಜ್ಞಾನ-ಅಧ್ಯಾತ್ಮ"
ವಿಜ್ಞಾನಿ ಮಾಡಿದ ಸಹಜ ನರ ಶಿಶುಪ್ರನಾಳ
ಸುಜ್ಞಾನಿ ಹಾಡಿದ ಮೋಡಿ ಸುಜನರ ಶಿಶುನಾಳ
ಅಜ್ಞಾನ ಕಡಿದು ನೋಡಿ ತಿಳಿಯಿರೆಂದ ಬದುಕಿನಾಳ
ಪ್ರಜ್ಞೆಯಿಂದೆರಡೂ ಸಮಪಾಕವಾಗಿಸಿ ಬದುಕು ನಿರಾಳ..
೭೩."ಮನಸ್ಸು"
ಬುದ್ಧಿಯೊಂದಿಗೆ ಸ್ಥಿಮಿತದಲ್ಲಿರಲಿ ತುರಂಗ
ಬದ್ಧತೆಯಿಂದ ಚಿತ್ತದಲ್ಲಿ ಹಾರಾಡಲಿ ತಿರಂಗ
ಶುದ್ಧನೀರಿಗೆ ಒರತೆ ಮೂಲವಿದ್ದಂತೆ ಸುರಂಗ
ಸಿದ್ಧದಾರಿಗೆ ಅರಿತ ಕಾಲನಿರುವ ಶ್ರೀರಂಗ
೭೪."ಶ್ರಮ-ಅದೃಷ್ಟ"
ಗಿರಿಯೆಡೆಗೆ ಸಾಗಲು ಚೆನ್ನ ಒಂದೊಂದೆ ಮೆಟ್ಟಿಲು..
ಗುರಿಯದುವೆ ಸಿಗಲು ಚಿನ್ನ ತೂಗಿದಂತೆ ತೊಟ್ಟಿಲು..
ಭಾರವಾದರೂ ನೀರೆರೆದು ಧವಸ ಕದಿರು ಕಟ್ಟಲು..
ಬಿರಿಯುವುದು ತುಂಬುವುದು ಆತ್ಮತೃಪ್ತಿಯ ಬಟ್ಟಲು..
೭೫.  "ಬದುಕು"
ಬಾಳಿನ ಪಾಠದಲ್ಲಿದೆ ಅನೇಕ ಸರ್ಗ..
ತಿಳಿಯದ ತಿರುವುಗಳಲ್ಲಿ  ತಪ್ಪಿ ಬಿದ್ದರೆ ವಿಸರ್ಗ..
ಕಳೆಯದೆ ಬಳಸಿದರೆ ಉಳಿಸುವುದು ನಿಸರ್ಗ..
ತೊಳೆಯುವುದು ಮನದ ಕೊಳೆಯ ಸಜ್ಜನರ ಸಂಸರ್ಗ..
೭೬.  "ಬದಲಾವಣೆ"
ಆರತಿಯೊಂದಿಗೆ ಕೀರುತಿ ತರುವಳು ಮಗಳು..
ಸರದಿ ಬಂದಿದೆ ಹುಡುಗಿ ಮುಖದಲ್ಲೂ ಮುಗುಳು..:)
ಸರಿದಾರಿಗೆ ಬರುವಲ್ಲಿ ಬಾಕಿ ಇನ್ನೊಂದು ಮಗ್ಗಲು..
ಕರಟಿ ಹೋಗುತಿವೆ ಗಂಡು ಧಾರ್ಷ್ಟ್ಯಕೆ ಕೆಲ ಮೊಗ್ಗುಗಳು..:(
೭೭."ಸ್ತ್ರೀ"
ಮೈಯೆಲ್ಲ ಕಣ್ಣಾಗಿ ಗಮನಿಸುವರು ಅವಳ ಪ್ರಾಯ..
ನಯವಾಗಿ ಹೆಣ್ಣೆಂದು ಮನ್ನಿಸರು ಸದಭಿಪ್ರಾಯ..
ಬಯಸುವುದು ತರವಲ್ಲ ಆಕೆ ನಿಮ್ಮ ಛಾಯಾ..
ದಯಪಾಲಿಸುವಳು ತರುವಲ್ಲಿ ಹಣ್ಣಂತೆ ಆದರೂ ಗಾಯ..
೭೮."ನನ್ನ ದೇಶ"
ಬಡವಾಗಿ ಇದ್ದರೂ ಬಾಳಿಗೊಂದೇ ತವರು..
ದೃಢವಾಗಿ ಬದ್ಧರು ನಮ್ಮಏಳಿಗೆಗೆ ಹೆತ್ತವರು..
ಗಡಿಯಲ್ಲಿ ಸಿದ್ಧರು ದೇಶ ಸೇವೆಗೆ ಹಿತವರು..
ಗುಡಿಯಲ್ಲಿ ಶುದ್ಧನ ಕಾಯ್ವ ಬಾಗಿಲಿನ ಗುರುತವರು..
೭೯."ಗೆಲುವು"
ಎಸೆದರೇನಂತೆ ನಿನ್ನ ನೆತ್ತಿಗೆ ಕಲ್ಲು..
ವಸಿಯದರ ಜೋಡಿಸಿ ಹತ್ತಿ  ನೀ ನಿಲ್ಲು..
ಹುಸಿನಕ್ಕು ಮುರಿದರೂ ಶ್ರಮದ ಗೆಲ್ಲು..
ಉಸುಕಲೂ ಚಿಗುರಾಗಿ  ಛಲದಿ ಗೆಲ್ಲು..!
೮೦."ನರ-ನಾರಾಯಣ"
ವರ್ತಿಯಿಂದಲೆ ಬೆಳಗದು ಮನೆಯ ಹಣತೆ..
ಭಕ್ತಿಯಿಂದಲೆ ತೊಲಗದು ಮನದ ಖಿನ್ನತೆ..
ಯುಕ್ತ ಹಂಚಲು ಶ್ರೀಶೈಲನೇ ಹಸಿದ ಜನತೆ..
ಮುಕ್ತ ನೀ ಹಚ್ಚು ತೈಲದಿ ಋಷಿಯ ಮಹಾನತೆ..