Friday 25 May 2012

ಚುಟುಕ "೮೧-೧೦೦"


೮೧."ಶ್ರಮ-ವಿಕ್ರಮ"
ಹಿಡಿದ ಗುರಿ ಸಾಧಿಸು ಉತ್ಸಾಹ ಸಾಯದೇ..
ನಡೆ ಹಿಂದೆ ನೋಡದೇ ಯಶಸ್ಸಿದ್ಧ ಕಾಯದೇ..
ಕೂಡದು ಹಾದಿ ಕ್ರಮಿಸಲು ಕಾಲು ನೋಯದೇ..
ಪಡೆದ ಜಯದಿ ಕಳೆದ ನೋವು ಮಾಯದೇ..?
೮೨."ಗುರು"
ನಡೆವ ಹಾದಿಯೊಳು ಮುಳ್ಳು ತರಚಿದರೂ..
ಗುಡುಗಿ ಮಳೆಗಾಗಿ ಪರರ ನೆಚ್ಚದಿರು..
ಅಡಿಗಡಿಗೆ ಹಿಡಿವ ಹಸ್ತ ಚಾಚಿಗುರು..
ಬಿಡದೆ ಛಲಜಲವ ಕುಡಿದು ಚಿಗುರು..
೮೩."ಪ್ರಾರ್ಥನೆ"
ಹುಟ್ಟುವುದು ಸಾಯುವುದು ಜನರ ಪಾಡು
ದಟ್ಟವಾಯಿತೆ ಪಾರಾಗಲು ಕಷ್ಟ ಕಾಡು..?
ನಷ್ಟಮಾಡದೆ ಭಕ್ತಿ,ಛಲಕೆ ಕಾಪಾಡು
ಕೊಟ್ಟು ಒಳ್ಳೆಯತನವ ಮನದಿ ಕಾಡು
೮೪."ಸ್ವದೇಶಿ"
ಕೋಕಕೋಲ ಪೆಪ್ಸಿ ಸ್ಟ್ರಾಬೆರಿ ಸೇಬು..
ಕೊಕ್ಕೋ ಎಲ್ಲಾ ತಪ್ಸಿ ದುಬಾರಿ ಜೇಬು..
ಬೇಕು ಸ್ವಕೃಷಿಯ ಪೇರಳೆ,ನಿಂಬೂ..
ಸಾಕು ಎಳನೀರು ನೇರಳೆ ಜಂಬೂ..
೮೫."ನಂದನ"
ಬರುತಿರುವ ಏಳಿಗೆಯ ನಂದನ..
ತರುತಿರುವ ಬೆಳಕಿನ ಇಂಧನ
ಸರಿಕರೆವ  ಹೇಳಿ ಅಭಿವಂದನ
ನುರಿತನಿವ ಬಾಳುವೆಯ ಬಂಧನ..
೮೬."ಹೊಸತು"
ಭಾನಿಲ್ಲದೆ ಕತ್ತಲೆಂದು ಕೊರಗದಿರು ಇಂದು..
ಬಾನಲ್ಲಿಯೆ ಸುತ್ತಲಿಗೂ ದಾರಿತೋರುವ "ಇಂದು"
ಬೆನ್ನಲ್ಲಿಯೆ ಮುಕ್ತವಿದು ಹಳೆಕಾಲವು ಸಂದು..
ಬಾ ನಾಳೆಗೆ ಶಕ್ತವಿದು ಕಳೆದಾಯಿತು ಸಂಧು..
೮೭"ಯುಗಾದಿ"
ಬಾ ನಿಲ್ಲದೆ ತುತ್ತುದಿಗೆ ಗುರಿಕಾಣುವ ಗಾದಿ..
ಬಾನೆಲ್ಲೆಗೆ ಹತ್ತಲಿದೇ ಸಿರಿಯಾಗಿ ಯುಗಾದಿ..
ಭಿನ್ನವಾದರೂ ತೊಲಗದಿರು ಸರಿಸಣ್ ಹಾದಿ..
ಬನವಾಸಿ ಹಾರೈಸಿದೆ ಕವಿತೆಯೊಂದ ಹಾಡಿ..
೮೮."ನಿರುಪಯೋಗಿ"
ಮಾನ ಮುಚ್ಚುವುದೆ ನಾಯಿ ಬಾಲಕೆ..?
ನೊಣ ಕಚ್ಚದೇ ತನ್ನ ಹಂಬಲಕೆ..
ಗುಣ ಹೆಚ್ಚಿದರೆ ಶ್ರೇಷ್ಠ ಬಳಕೆ..
ವಿನಾ ನೆಚ್ಚದಿರು ಭ್ರಷ್ಟ ಬಲಕೆ..
೮೯."ಫೇಸ್ ಬುಕ್"
ದಿನವೆಲ್ಲ ದುಡಿದುಂ ಶ್ರಮಕೆ ಮನ ಸಣ್ಣಮುಖೀ..
ಜನರೆಲ್ಲ ಕೂಡಿಡುಂ ವಿಶ್ರಮಕೆ ತಾಣ ಸಂಮುಖೀ..
ಬಣದಲ್ಲಿ ನೋಡಿಯುಂ ರಾಮನಿವ ಸಹ ಸನ್ಮುಖೀ..
ಗುಣದಲ್ಲಿ ಬೇಡಿಯುಂ ವಿರಾಮವೀವ ಹಸನ್ಮುಖೀ..
೯೦."ಬೇಡಿಕೆ"
ದೇವ ನನ್ನ ತನುಮನ ನಿನಗೆ ಶರಣ..
ನೋವ ಮುನ್ನ ಕರಗಿಸಿ ತೋರು ದಿಶಾರುಣ..
ಜೀವ ನಿನ್ನ ಮಾಳ್ಪುದು ನಿತ್ಯ ಅನುಸರಣ..
ಭಾವ ಭಕ್ತಿಗೆ ಸ್ಫುರಿಸು ಶಾಂತಿ ಪ್ರಸರಣ..
೯೧."ಸೀತಾರಮಣ"
ಕಶ್ಮಲವ ಕಳೆದೇವ ಸೀತಾರಮಣ..
ವಿಸ್ಮಯವ್ ಇಳೆಗೆ ನಿನ್ನಾಮದ ಭ್ರಮಣ..
ಭಸ್ಮಿಸಿದೆ  ಕತ್ತರಿಸಿ ಕಳೆದ್ ರಾವಣ..
ಸುಸ್ಮಿತನೆತ್ತು ಅರಿಸಿ ಕೊಳೆ ದ್ರಾವಣ..
೯೨."ರಾಮ"
ಹಾಡಿ ಮಿಡಿಯಲು ನಾಡಿ ರಾಮನ..
ನೋಡಿ ಹಿಡಿಯಲು ಜಾಡು ಗಮನ..
ಕೂಡಿ ನಡೆಯುವೆ  ಕಾಡಿ ಯಮನ..
ಬೇಡಿ ಪಡೆಯುವೆ ಮುಡಿ ಸುಮನ..
೯೩."ನೀತಿ"
ಮೆಟ್ಟಿಲದು ಸಾಧನೆಗೆ ಹಿರಿ,ದೇವರಿಗೆ ನಮನ..
ಕೆಟ್ಟ ಪರ ವೇದನೆಗೆ ಕಾರಣದ ಹಾದಿ ವಮನ..
ದುಷ್ಟಜನ ವ್ಯವಹಾರದ ಮಾರಣ ನೀತಿ ದಮನ..
ಇಷ್ಟವಾಗಿ ಸಜ್ಜನರಿಗೆ ತೋರಣ ಶಾಂತಿ ಶಮನ..
೯೪."ರೀತಿ"
ಗುರಿ ತೋರಲಿ ಸದಾ ಸೇವಿತ ಗುರುಚರಣ
ಗಿರಿಯೆಡೆಗೆ  ಮಾಡಿದಂತೆ  ಸಾಹಸ ಚಾರಣ
ಗರಿಯಂತೆ ಸಜ್ಜನ ಸಾಹಚರ್ಯ  ವಿಚಾರಣ
ಗಾರೆಯಾಗಲಿ ವಿಶ್ವಾಸದ ಸಹಜ ಚೂರಣ
೯೫."ದ್ರೋಹ"
ಕಟ್ಟಿಕೊಳ್ಳಲು ನಾ ಆತ್ಮವಿಶ್ವಾಸದ ಕಟ್ಟೆ..
ಬಿಟ್ಟುಕೊಂಡು ನಿನ್ನ ಬಳಿಗೆ ಕರಗಿ ಕೆಟ್ಟೆ..
ಇಷ್ಟವಾಗಿ ನಿನ್ನ ಬಾಳಿಗೆ ಹೆಗಲು ಕೊಟ್ಟೆ.
ಕಷ್ಟ ಕಾಲದಿ ಬಿಟ್ಟು  ಸುಡುಕೊಳ್ಳಿಯಾಕಿಟ್ಟೆ.?
೯೬."ಮನಸ್ಸು"
ಜಂಜಡದ ಎಡೆಯೊಳಗೆ ಬರಬಾರದು ಸಿಟ್ಟು
ಮಂಜಂತೆ ತಿಳಿ ಬಿಸಿಲಿಗೆ ಮನ ಕರಗಿಸಿಟ್ಟು..
ದುರ್ಜಡತ್ವವು ಕಳಚಿಕೊಳ್ಳಲಿ ಬೆರಗು ಸುಟ್ಟು.
ನಿಜ ನಡತೆಯ ನೆಮ್ಮದಿ ಬಾ ಶುದ್ಧ ಮನಸುಟ್ಟು..(ಮನಸು+ಉಟ್ಟು)
೯೭."ಒಳಿತು"
ದೇವದಾರಿಗೆ ಮೇಲೇರಲು ನೂರಾರು ಬಿಳಲು
ಅವನ ಕೃಪೆ ಒಂದಿರಲು ಆಗದು ಬೀಳಲು..
ಜೀವನದೊಳು ಮರೆತಾಗ ನೋವಿಂದ ಬಳಲು
ಭಾವಕೆ ನಂಬಿಕೆ ಬೆರೆತು ಸವಿಯೇ ಬಾಳಲು..
೯೮."ಮಾತು"
ನೀತಿ ತಪ್ಪಿದರೆ ಆಗುವುದು ತಕರಾರು
ಮಾತಿಗೊಪ್ಪಿದರೆ ನಡೆಯಬೇಕು ಕರಾರು
ನೈತಿಕ ಅಡಿಪಾಯವಿರೆ ಬಿದ್ದವರಾರು..?
ಧೃತಿಯಿಂದ ಮತಿಯೋಡೆ ಗೆಲ್ಲು ಸಾವಿರಾರು..
೯೯."ಕೃಷ್ಣ"
ಕುಸಿದು ಕುಳಿತವಳೆ ತಾಯಿ ಭವಾನಿ..
ಹುಸಿ ಮಾತು ಕೊಟ್ಟೆಯಾ ಅರ್ಜುನ ಭಾವಾ ನೀ..
ಅಸುರ ಗುಣ ಸಂಹರಿಸೆ ಸಂಭವಾಮಿ..
ವಸುಧೆಯೊಳ್ ಅವತರಿಸಲ್ ಭಾವಯಾಮಿ..
೧೦೦."ಅನ್ವೇಷಣೆ.."
ಮನೆಯಲ್ಲಿ ಹುಡುಕಿದೆ..ಗುಡಿಯಲ್ಲಿ ಹುಡುಕಿದೆ..
ಮನದೊಳು ಹುಡುಗಿಯ ರೂಪವದು ಸುಡುತಿದೆ..
ಗೂಗಲೊಳು ತಡಕಿ ಜಗವೆಲ್ಲ ಗುಡಿಸಿದರೂ..
ಜಗಲಿಯದು ಮನೆಯೇ...ಅಮ್ಮನಿಗೆ ಖಾಲಿ..ಖಾಲಿ...:((

No comments:

Post a Comment