Tuesday 4 December 2012

"ಮೂಗು"

೨೦೦೪ ಮೇ ನಲ್ಲಿ ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಹಾಸ್ಯ ಲೇಖನ...

ನನ್ನ ಇದೇ ಲಲಿತಪ್ರಬಂಧದ ಹಳೆಯ ಪ್ರತಿಯನ್ನು ನನ್ನ ಮಿತ್ರರೋರ್ವರು ಅರ್ಧಂಬರ್ಧ ಓದಿ "ಇದೇನು ಸ್ವಾಮೀ ಮೂಗಿನ ವಿಷಯದಲ್ಲಿ ಪಿ.ಹೆಚ್.ಡಿ ಮಾಡಲು ಹೊರಟಿದ್ದೀರಾ?" ಎಂದು ನನ್ನನ್ನು ಪ್ರಶ್ಣಿಸಿದರು..ಅದಕ್ಕೆ ನಾನು ಮನದಲ್ಲೇ ನಕ್ಕು" ಹೌದು ಸ್ವಾಮೀ ಎಲ್ಲರೂ ಪ್ರಕೃತಿ ಪುರಾತನವಸ್ತು,ಭಾಷೆ ಇತ್ಯಾದಿಗಳ ಮೇಲೆ ಸಂಶೋಧನೆ ಮಾಡುತ್ತಾ ಡಾಕ್ಟರೇಟ್ ಪಡೆಯುತ್ತಿರುವಾಗ ನಮ್ಮೆಲ್ಲಾ ಜೀವಿಗಳ ಅವಿಭಾಜ್ಯ ಅಂಗವಾದ ಮೂಗಿನ ಬಗ್ಗೆ ಪಿ.ಹೆಚ್.ಡಿ ಮಾಡಬಾರದೇಕೆ?" ಎಂದು ತಿರುಗಿ ಪ್ರಶ್ಣಿಸಿದೆ."ಓಹೋ ಹಾಗೇನು?" ಎಂದು ಬೇರೆ ವಿಷಯದತ್ತ ಗಮನ ಹರಿಸಿದರು.ಅವರು ಇಂತಧುದರ ಬಗ್ಗೆ ಹೆಚ್ಚು ತಿಳಿದವರಲ್ಲ.

ಇನ್ನು ನೇರವಾಗಿ ವಿಷಯಕ್ಕೆ ಬರೋಣ.ಕೆಲವು ಅವಿವೇಕಿಗಳು ಇಬ್ಬರು ಜಗಳಮಾಡುತ್ತಿರುವಾಗ ಮಧ್ಯೆ ಪ್ರವೇಶಿಸಿ ಜಗಳ ಮಾಡುತ್ತಿರುವವರ ಕೈಯಿಂದ(ಬಾಯಿಯಿಂದ?)"ನೀನು ನಮ್ಮ ವಿಷಯದಲ್ಲಿ ಮೂಗು ತೂರಿಸಬೇಡ ಎಂದು ಬೈಸಿಕೊಳ್ಳುತ್ತಾರೆ.ಮೂರನೆಯವನು ನಿತ್ರಾಣಿಯಾಗಿದ್ದು ಉಳಿದಿಬ್ಬರು ಮಹಾಪ್ರಾಣಿಗಳಾಗಿದ್ದಲ್ಲಿ ಅವರಿಬ್ಬರ ಕೈಯಿಂದಲೂ ಏತು ತಿಂದು ನಿಷ್ಪ್ರಾಣಿಗಳಾಗುತ್ತಾರೆ.(ಇದಕ್ಕೆ ಸ್ಫೂರ್ತಿ:ವ್ರೆಸ್ಲಿಂಗ್ ನಲ್ಲಿ ಜಗಜಟ್ಟಿಗಳಿಂದ ರೆಫ್ರೀ ಏಟು ತಿಂದ ದೃಶ್ಯ!)

ನಮ್ಮ ಮಂಗಳೂರು ಕಾಸರಗೋಡಿನ ಕಡೆ ಸ್ವಲ್ಪ ಹೆಚ್ಚು ಕೋಪ ಇರುವವರನ್ನು "ಅವನಿಗೆ ಮೂಗಿನ ಮೇಲೆ ಮಸಿ ಉಂಟು ಎನ್ನುವಾಗ ಕೋಪ" ಎಂದು ಇತರರು ಗೇಲಿ ಮಾಡುವುದುಂಟು.ನೀವೆಂದಾದರೂ ಉಭಯ ಕುಶಲೋಪರಿಯ ನಡುವೆ (ಈ ಬರಗಾಲದಲ್ಲಿ) ಕೆರೆಯಲ್ಲಾಗಲೀ ಹೊಳೆಯಲ್ಲಾಗಲೀ "ನೀರು ಎಷ್ಟಿದೆ"? ಎಂದು ಮಾತ್ರ ಕೇಳಬೇಡಿ..ಅವರು "ಕಪ್ಪೆಗೆ ಮೂಗಿನ ವರೆಗೆ ಮಾತ್ರ" ಎಂದಾರು..!!
ಸೌದೆ ತುಂಡರಿಸುವಾಗ ಆ ಕತ್ತಿ ಹರಿತವಾಗಿಲ್ಲದಿದ್ದಲ್ಲಿ "ಸತ್ತ ಹೆಣದ ಮೂಗು ಕೊಯ್ಯಲೂ ಸಾಧ್ಯವಿಲ್ಲ ಈ ಕತ್ತಿಯಿಂದ" ಎಂದು ಗೊಣಗುವವರಿದ್ದಾರೆ.ಮಕ್ಕಳು ಸ್ವಲ್ಪ ಜಾಸ್ತಿ ಊಟ ಮಾಡಿದ್ದು ತಾಯಿಯ ಬಳಿ ಪುನಃ ಏನಾದರೂ ತಿಂಡಿ ಕೇಳ ಹೋದರೆ "ಈಗ ತಿಂದದ್ದೇ ಮೂಗಿನವರೆಗೆ ಆಗಿದೆ,ಇನ್ನೂ ಎಲ್ಲಿಗೆ ತುಂಬಿಸುವುದು?" ಎಂದು ತಂದೆ ಗದರುವುದುಂಟು..

ಕೆಲವರು ಮಾತನಾಡುತ್ತಿದ್ದರಂತೂ ಮೂಗಿನಲ್ಲಿ ಮಾತನಾಡುತ್ತಿದ್ದಾರೋ ಬಾಯಲ್ಲಿ ಮಾತನಾಡುತ್ತಿದ್ದಾರೋ ಎಂಬುದೇ ತಿಳಿಯುವುದಿಲ್ಲ.ಕೆಲವು ರಾಜಕಾರಣಿಗಳಂತೂ ತಮ್ಮ ಮೂಗಿನ ನೇರಕ್ಕೇ ಮಾತಾಡುವುದು.ಆಮೇಲೆ ವೋಟು ಸಿಕ್ಕಿ ತಮ್ಮ ಸ್ಥಾನ ಭದ್ರವಾದ ನಂತರ ಜನರು ಏನಾದರೂ ಸಮಸ್ಯಾ ಪರಿಹಾರಕ್ಕೆ ಹೋದರೆ ಅವರನ್ನು ಕಂಡ ಕೂಡಲೇ "ಮೂಗು ಮುರಿಯುತ್ತಾರೆ" ಅಥವಾ "ಮೂಗಳೆ"ಯುತ್ತಾರೆ.!
ಇನ್ನು ಇತಿಹಾಸದತ್ತ ನೋಡಿದರೆ ಕಾಳಿದಾಸನೂ ಮೂಗನ್ನು ಸಂಪಿಗೆಗೆ ಹೋಲಿಸಿದ್ದಾನೆ. ಸಂಪಿಗೆ ಎಲ್ಲಿದ್ದರೂ ನಾವು ಮೂಗರಳಿಸುವುದಿಲ್ಲವೇ..? ಶೂರ್ಪನಖಿಯ ಮೂಗಿನಿಂದಾಗಿ "ನಾಸಿಕ್" ಎಂದು ಊರಿಗೆ ಹೆಸರಾಯಿತು..!!

ಮೊನ್ನೆ ಪೇಪರ್ ನಲ್ಲಿ ವಿದೇಶೀ ವಾರ್ತೆಯ ವಿಭಾಗದಲ್ಲಿ ಓದಿದ್ದೆ.ಒಬ್ಬಾಕೆಯನ್ನು ಕಳ್ಲರು ಅವಳ ಮನೆಯಲ್ಲಿಯೇ ಕಟ್ತಿ ಹಾಕಿ ಹಣವನ್ನೆಲ್ಲಾ ಕದ್ದುಕೊಂಡು ಹೋದರಂತೆ..ಆದರೆ ಆ ಮಹಿಳಾಮಣಿ ತನ್ನ ಮೂಗಿನಿಂದ ಫೋನ್ ಮಾಡಿ ಪೋಲೀಸರನ್ನು ಕರೆಸಿ ಅವರನ್ನು ಜೈಲಿಗೆ ಕಳಿಸಿದಳಂತೆ.ಮೂಗಿನಿಂದ ಅವಳು ಹೇಗೆ ಫೋನ್ ಮಾಡಿದಳೋ,ಪೋಲೀಸರು ಬರುವ ವರೆಗೂ ಆ ಕಳ್ಲರು ಅಲ್ಲೇ ಇದ್ದರೋ ಕಾಣೆವು.ಬಹುಷಃ ಅವಳ ಮೂಗು ತುಂಬಾ ಉದ್ದ ಇದ್ದಿರಬಹುದೆ?

ಅಂದ ಹಾಗೆ ಉದ್ದ ಮೂಗು ಎಂದಕೂಡಲೇ ನೆನಪಾಯಿತು ನೋಡಿ, ಮೊನ್ನೆ ಒಬ್ಬಾಕೆ (ಉದ್ದ ಮೂಗು ಇರುವವಳು) ನನ್ನಲ್ಲಿ ಮಾತನಾಡುತ್ತಿದ್ದಳು.ನನ್ನ ದೃಷ್ಟಿ ಆಕೆಯ ಮೂಗಿನ ಕಡೆ ಹೋಗಿ ಆಮೇಲೆ ಯೋಚನೆ ಎಲ್ಲೆಲ್ಲೋ ಹರಿದು"ನಿನ್ನ ಈ ಮೋಗಿನಿಂದಾಗಿ ತುಟಿಗಳು ಕೆಲಸ ಮಾಡಲು ಅಡ್ಡಿಯಾಗಿರಬಹುದಲ್ಲವೇ?" ಎಂದೆ.ಸಧ್ಯ..! ಆಕೆ ನನ್ನ ಸಂಬಂಧಿಕಳೂ,ಸ್ನೇಹಿತೆಯೂ ಎರಡೂ ಆಗಿದ್ದರಿಂದ ನನ್ನ ಮೂಗಿನ ಪಕ್ಕದ ವಿಶಾಲ ಹುಲ್ಲುಗಾವಲಿಗೆ ಸಿಡಿಲು ಬಡಿಯಲಿಲ್ಲ..:))
ಮೂಗಿನ ಬಗ್ಗೆ ನನ್ನ ಮಿತ್ರ ಹೇಳಿದ ಒಂದು ಜೋಕ್ ನೆನಪಾಗುತ್ತಿದೆ..ಇಲ್ಲಿ ಮೂಗಿನ ಪಾತ್ರ ಕನಿಷ್ಠದ್ದಾದರೂ ಮಹತ್ವದ್ದು..
ಒಮ್ಮೆ ಅಮೆರಿಕ,ಜಪಾನ್ ದೇಶದವರು ನಮ್ಮ ಭಾರತೀಯನೆದುರಿಗೆ ಬಡಾಯಿ ಕೊಚ್ಚುತ್ತಿದ್ದರು..
ಅಮೆರಿಕದವ:"ನಮ್ಮಲ್ಲಿ ವಿಮಾನಗಳೆಲ್ಲಾ ನೆಲದಲ್ಲೇ ವೇಗವಾಗಿ ಹೋಗುತ್ತವೆ"
ಉಳಿದಿಬ್ಬರು: ಹೌದೇ...?
ಅಮೆರಿಕದವ:"ಅಲ್ಲ ಸ್ವಲ್ಪ ಮೇಲೆ.. ಆಕಾಶದಲ್ಲಿ"
ಜಪಾನ್ ನವ:"ನಮ್ಮಲ್ಲಿ ರೈಲುಗಳೆಲ್ಲಾ ನೀರಿನಡಿಯಲ್ಲೂ ಓಡುತ್ತವೆ"
ಉಳಿದಿಬ್ಬರು: ಹೌದೇ...?
ಜಪಾನ್ ನವ:"ಅಲ್ಲ..ಸ್ವಲ್ಪ ಮೇಲೆ ನೆಲದಲ್ಲಿ"
ಆದರೆ ಭಾರತದಲ್ಲಾದರೋ ಹೇಳಿಕೊಳ್ಲುವುದೇನೂ ಇಲ್ಲ..ಆದರೆ ಇವರೆದುರು ಗೆಲ್ಲಬೇಕು..ಹೇಗೆಂದು ಚಿಂತಿಸಿ ಕೊನೆಗೆ ಹೇಳಿದ" ನಮ್ಮಲ್ಲಿ ಎಲ್ಲರೂ ಮೂಗಿನಲ್ಲೇ ಊಟ ಮಾಡುತ್ತಾರೆ"
ಉಳಿದಿಬ್ಬರು: ಹೌದೇ...?
ಭಾರತೀಯ: ಅಲ್ಲ.. ಸ್ವಲ್ಪ ಕೆಳಗೆ ಬಾಯಲ್ಲಿ..!!!
ಎಂದು ಅವರ ಢಾಂಭಿಕ ಗರ್ವವನ್ನು ಇಳಿಸಿದನಂತೆ..!
ಇನ್ನಾದರೂ ನೀವು ಮೂಗಿನ ಬಗ್ಗೆ ವಿಶೇಷ ಗಮನ ಹರಿಸದಿದ್ದಲ್ಲಿ ಕೇಳಿ..
ಅಡಿಗೆಯ ರುಚಿ ಮೊದಲು ನಿಮಗೆ ನಾಲಿಗೆಗಿಂತ ಮೊದಲು ತಿಳಿಯುವುದು ಮೂಗಿಗೇ ತಾನೆ?ಚಿಕ್ಕ ಮಕ್ಕಳು ಅಸಾಧಾರಣ ಕೆಲಸ ಮಾಡಿದರೆ ನೀವು"ಮೂಗಿನ ಮೇಲೆ ಬೆರಳಿಡುವುದಿಲ್ಲವೇನು?"ಅದೇ ಮಕ್ಕಳು ಅಧಿಕಪ್ರಸಂಗ ತೋರಿದರೆ "ನಿನಗೆ ಮೂಗುದಾರ ಹಾಕಬೇಕು" ಎಂದು ಗದರಿಸುವುದಿಲ್ಲವೇನು?
ರಾತ್ರೆ ಎಲ್ಲಾದರೂ ನಿವು "ಮೂಗು ಕಟ್ತಿದೆ(ಅಥವಾ ಕೆಟ್ಟಿದೆ) ಎಂದು ಬಾಯಗಲಿಸಿ ಉಸಿರಾಡಿದಿರೋ ಹುಷಾರ್!
ನಿಮ್ಮ ಪಕ್ಕದವರು ನಿಮ್ಮನ್ನು "ಗೊರಕೆ ವೀರ" ಎಂದೌ ಜರಿದಾರು! ನಿಮ್ಮ ದೃಷ್ಟಿ ಮಂದವಾದಾಗ "ಸುಲೋಚನ" ನಿಮ್ಮ ಮೂಗಿನ ಮೇಲೆಯೇ ಕುಳಿತುಕೊಳ್ಲುತ್ತಾಳೆ!

ಇಷ್ಟೊಂದು ಪರಿಸರಮಾಲಿನ್ಯ,ಧೂಳು,ಹೊಗೆ ಇದ್ದಾಗಲೂ ನೀವು ಆರೋಗ್ಯವಂತರಾಗಿರಲು ಕಾರಣ ಮೂಗು ಗಾಳಿಯನ್ನು ಸಾಧ್ಯವಾದಷ್ಟು ಶುದ್ಧ್ಹೀಕರಿಸುವುದರಿಂದ..
"ಹಲ್ಲೆದುರು"(ಎದುರುಹಲ್ಲು) ಇಲ್ಲದವರಿಗೆ ಮೂಗೇ ಬಂಪರ್ ಎಂದು ಮಿತ್ರನೊಬ್ಬ ನಗೆಯಾಡುವುದಿದೆ.ಕೆಲವರು ತಿಲಕವನ್ನಿಡುವುದಂತೂ ಮೂಗಿನ ಬುಡದಲ್ಲಿ.ಕೆಲವರಿಗೆ ಹದ್ದಿನಂತೆ,ಗಿನಿಯಂತೆ,ವಾನರನಂತೆ ಮೂಗಿನ ಆಕಾರವಿರುತ್ತದೆ,ಅದರಿಂದಾಗಿಯೇ ಸಾಕಷ್ಟು ಉಪನಾಮ(ಮಾನ) ಹುಟ್ಟುಕೊಂಡಿರುತ್ತವೆ.ಮೂಗನ್ನು ಕುರಿತು ಒಂದು ಒಗಟಂತೂ ಪ್ರಸಿದ್ಧ."ಪುಟ್ಟ ಮನೆಗೆ ಚಿನ್ನದ ಬೀಗ"

ಕೆಲವು ಮೂಗುದಾರ ಹಾಕದ ಕೋಣಗಳಂತೂ ಪಕ್ಕದ ಮನೆಯವರಿಗೆ "ನಿತ್ಯ ಭಯೋತ್ಪಾದಕ"ಅದರ ಹಗ್ಗ ಬಿಚ್ಚಿದಾಕ್ಷಣ ಶತ್ರುಪಾಳೆಯವನ್ನು ಧ್ವಂಸ ಮಾಡಿಯೇ ಬರುವುದು..!
ಧೂಮಪಾನಿಗಳಿಗಂತೂ ಬಾಯಲ್ಲಿ"ಧೂಮಕೇತು"ವನ್ನಿರಿಸಿ ಚೆನ್ನಾಗಿ ಎಳೆದು ಮೂಗಿನ ಮೂಲಕ ಹೊಗೆ ಬಿಟ್ಟರೇನೇ ಸಮಾಧಾನ.ಆ ಮೂಲಕ ಇತರ ಜನರಿಗೂ ಹೊಗೆ ಕುಡಿಸಿ ಜನಸಂಖ್ಯಾ ಸ್ಫೋಟವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.ಇನ್ನು ಕೆಲವರು ನಶ್ಯ ಎಳೆದು "ಆ.........ಕ್ಷೀ" ಎಂದು ಸೀನು ಬರಿಸಿ ತಮ್ಮ ಯೋಚನೆಗೆ ಅದೊಂದು ಜ್ಞಾನಚೂರ್ಣವೆಂದು ಬೀಗುತ್ತಾರೆ.ಇನ್ನು ಪೇಟೆಗೆ ಹೋದರಂತೂ( ನೀವು ಮೂಗು ಇದೆಯೇ ಇಲ್ಲವೇ ಎಂದು ಪರೀಕ್ಷಿಸಿಕೊಳ್ಳುತ್ತಿದ್ದೀರೇನೋ ಎಂದು ಇತರರು ಅಂದುಕೊಳ್ಲಬೇಕು) ಕೈಗೂ ಮೂಗಿಗೂ ಅವಿನಾಭಾವ ಸಂಬಂಧ ಉಂಟಾಗುತ್ತದೆ.

ಕೊನೆಯದಾಗಿ ಒಂದು ಸಲಹೆ: ಮಗು ಕಚ್ಚಿದಾಗ ಮೂಗನ್ನು ಒತ್ತಿ ಹಿಡಿಯಿರಿ(ನಿಮ್ಮದಲ್ಲ,ಮಗುವಿನದ್ದು!).ಅದು ಉಸಿರಾಡುವ ನೆಪಕ್ಕಾದರೂ ಬಾಯಿಯ ಹಿಡಿತ ಸಡಿಲಿಸುತ್ತದೆ.
ಇಷ್ಟು ಉದ್ದದ ಮೂಗನ್ನು...ಅಲ್ಲಲ್ಲ..ಮೂಗಿನ ಕುರಿತ ಲೇಖನವನ್ನು ನಾನಂತೂ ನನ್ನ ಮೂಗಿನ ನೇರಕ್ಕೇ ಬರೆದಿದ್ದು ಇದರಿಂದ ನೀವು ಮೂಗು ಮುರಿದರೂ ಮೂಗಿನ ಮೇಲೆ ಬೆರೆಳಿಟ್ತರೂ ಸಮಾನವಾಗಿ ಸ್ವೀಕರಿಸುತ್ತೇನೆ..ಏಕೆಂದರೆ ಅದರಿಂದ ನನ್ನ ಮೂಗಿಗೇನೂ ಹಾನಿಯಿಲ್ಲವಲ್ಲ..!!:))

No comments:

Post a Comment