Wednesday 23 May 2012

ಚುಟುಕ "೭೧-೮೦"


೭೧."ಸಾಧನೆ"
ಕರೆಯುತಿದೆ ನಿನಗಾಗಿ ಸಾಧಿಸಲು ಜಗದಂಗಳ..
ಅರಿಯುತಿರೆ ಹೊಸದಾಗಿ ಬಾಧಿಸುವುದು ನಿನ ಕಂಗಳ..
ಸುರಿಯುತಿರೆ ಶ್ರಮವೆಲ್ಲ ಯಶವಾದಂತೆ ಬೆಳದಿಂಗಳ..
ಸಿರಿಯ ತೊರೆ ಕ್ರಮದಲ್ಲಿ ವಶವಾದಂತೆ ಮಂಗಳ...
೭೨."ವಿಜ್ಞಾನ-ಅಧ್ಯಾತ್ಮ"
ವಿಜ್ಞಾನಿ ಮಾಡಿದ ಸಹಜ ನರ ಶಿಶುಪ್ರನಾಳ
ಸುಜ್ಞಾನಿ ಹಾಡಿದ ಮೋಡಿ ಸುಜನರ ಶಿಶುನಾಳ
ಅಜ್ಞಾನ ಕಡಿದು ನೋಡಿ ತಿಳಿಯಿರೆಂದ ಬದುಕಿನಾಳ
ಪ್ರಜ್ಞೆಯಿಂದೆರಡೂ ಸಮಪಾಕವಾಗಿಸಿ ಬದುಕು ನಿರಾಳ..
೭೩."ಮನಸ್ಸು"
ಬುದ್ಧಿಯೊಂದಿಗೆ ಸ್ಥಿಮಿತದಲ್ಲಿರಲಿ ತುರಂಗ
ಬದ್ಧತೆಯಿಂದ ಚಿತ್ತದಲ್ಲಿ ಹಾರಾಡಲಿ ತಿರಂಗ
ಶುದ್ಧನೀರಿಗೆ ಒರತೆ ಮೂಲವಿದ್ದಂತೆ ಸುರಂಗ
ಸಿದ್ಧದಾರಿಗೆ ಅರಿತ ಕಾಲನಿರುವ ಶ್ರೀರಂಗ
೭೪."ಶ್ರಮ-ಅದೃಷ್ಟ"
ಗಿರಿಯೆಡೆಗೆ ಸಾಗಲು ಚೆನ್ನ ಒಂದೊಂದೆ ಮೆಟ್ಟಿಲು..
ಗುರಿಯದುವೆ ಸಿಗಲು ಚಿನ್ನ ತೂಗಿದಂತೆ ತೊಟ್ಟಿಲು..
ಭಾರವಾದರೂ ನೀರೆರೆದು ಧವಸ ಕದಿರು ಕಟ್ಟಲು..
ಬಿರಿಯುವುದು ತುಂಬುವುದು ಆತ್ಮತೃಪ್ತಿಯ ಬಟ್ಟಲು..
೭೫.  "ಬದುಕು"
ಬಾಳಿನ ಪಾಠದಲ್ಲಿದೆ ಅನೇಕ ಸರ್ಗ..
ತಿಳಿಯದ ತಿರುವುಗಳಲ್ಲಿ  ತಪ್ಪಿ ಬಿದ್ದರೆ ವಿಸರ್ಗ..
ಕಳೆಯದೆ ಬಳಸಿದರೆ ಉಳಿಸುವುದು ನಿಸರ್ಗ..
ತೊಳೆಯುವುದು ಮನದ ಕೊಳೆಯ ಸಜ್ಜನರ ಸಂಸರ್ಗ..
೭೬.  "ಬದಲಾವಣೆ"
ಆರತಿಯೊಂದಿಗೆ ಕೀರುತಿ ತರುವಳು ಮಗಳು..
ಸರದಿ ಬಂದಿದೆ ಹುಡುಗಿ ಮುಖದಲ್ಲೂ ಮುಗುಳು..:)
ಸರಿದಾರಿಗೆ ಬರುವಲ್ಲಿ ಬಾಕಿ ಇನ್ನೊಂದು ಮಗ್ಗಲು..
ಕರಟಿ ಹೋಗುತಿವೆ ಗಂಡು ಧಾರ್ಷ್ಟ್ಯಕೆ ಕೆಲ ಮೊಗ್ಗುಗಳು..:(
೭೭."ಸ್ತ್ರೀ"
ಮೈಯೆಲ್ಲ ಕಣ್ಣಾಗಿ ಗಮನಿಸುವರು ಅವಳ ಪ್ರಾಯ..
ನಯವಾಗಿ ಹೆಣ್ಣೆಂದು ಮನ್ನಿಸರು ಸದಭಿಪ್ರಾಯ..
ಬಯಸುವುದು ತರವಲ್ಲ ಆಕೆ ನಿಮ್ಮ ಛಾಯಾ..
ದಯಪಾಲಿಸುವಳು ತರುವಲ್ಲಿ ಹಣ್ಣಂತೆ ಆದರೂ ಗಾಯ..
೭೮."ನನ್ನ ದೇಶ"
ಬಡವಾಗಿ ಇದ್ದರೂ ಬಾಳಿಗೊಂದೇ ತವರು..
ದೃಢವಾಗಿ ಬದ್ಧರು ನಮ್ಮಏಳಿಗೆಗೆ ಹೆತ್ತವರು..
ಗಡಿಯಲ್ಲಿ ಸಿದ್ಧರು ದೇಶ ಸೇವೆಗೆ ಹಿತವರು..
ಗುಡಿಯಲ್ಲಿ ಶುದ್ಧನ ಕಾಯ್ವ ಬಾಗಿಲಿನ ಗುರುತವರು..
೭೯."ಗೆಲುವು"
ಎಸೆದರೇನಂತೆ ನಿನ್ನ ನೆತ್ತಿಗೆ ಕಲ್ಲು..
ವಸಿಯದರ ಜೋಡಿಸಿ ಹತ್ತಿ  ನೀ ನಿಲ್ಲು..
ಹುಸಿನಕ್ಕು ಮುರಿದರೂ ಶ್ರಮದ ಗೆಲ್ಲು..
ಉಸುಕಲೂ ಚಿಗುರಾಗಿ  ಛಲದಿ ಗೆಲ್ಲು..!
೮೦."ನರ-ನಾರಾಯಣ"
ವರ್ತಿಯಿಂದಲೆ ಬೆಳಗದು ಮನೆಯ ಹಣತೆ..
ಭಕ್ತಿಯಿಂದಲೆ ತೊಲಗದು ಮನದ ಖಿನ್ನತೆ..
ಯುಕ್ತ ಹಂಚಲು ಶ್ರೀಶೈಲನೇ ಹಸಿದ ಜನತೆ..
ಮುಕ್ತ ನೀ ಹಚ್ಚು ತೈಲದಿ ಋಷಿಯ ಮಹಾನತೆ..

No comments:

Post a Comment