Thursday 1 March 2012

ಚುಟುಕ "೬೧-೭೦"


೬೧. "ಹೊಸತು-ಹಳತು"
ಆಪತ್ತು ಪಿಜ್ಜಾ ದೇಹಕ್ಕೆ, ಸಾಕು ಉಪ್ಪಿಟ್ಟು ಸಜ್ಜಿಗೆ..
ಒಪ್ಪತ್ತು ಕಜ್ಜಾಯ ದಾಹಕ್ಕೆ ಬೇಕು ಸಾಕಷ್ಟು ಮಜ್ಜಿಗೆ..
ತಪ್ಪದಿರಲಿ ಅಜ್ಜನ ಸಹವಾಸ,ಮದ್ದಾಗುವುದು ಗೊಜ್ಜಿಗೆ..
ಮುಪ್ಪಾದರೂ ಮಜ್ಜನ ಹವ್ಯಾಸ,ಮುದ್ದಾಗುವುದು ಅಜ್ಜಿಗೆ..
೬೨.   "ಜೀವನ"
ಕರುಳು ಸಾಕುವಾಗ ಇಪ್ಪತ್ತರವರೆಗೆ ಅರಳು..
ಕೆರಳಿ ಬದುಕುವಾಗ ನಲ್ವತ್ತರಸರಿಗೆ ಹೊರಳು..
ಮರುಳು ಮೆಲುಕಿನೊಳಗೆ ಅರುವತ್ತರೊಳಗೆ ಉರುಳು..
ನರಳಿ ಸಿಲುಕದೆಯೇ ಎಂಭತ್ತರಲ್ಲಿ ಇಲ್ಲಿಂದ ತೆರಳು..!
೬೩.   "ಅಹಿಂಸಾ ಪರಮೋ ಧರ್ಮಃ ಧರ್ಮ ಹಿಂಸಾ ತಥೈವ ಚ"
ಬುದ್ಧನಾದರೂ ಮಣ್ಣಿನಲಿ ಉಡಿ ಬಿಚ್ಚಿದ ಜಗಜಟ್ಟಿ ಮೊರೆದಂತೆ..
ಬದ್ಧನಾಗು ಕಣ್ಣಿನಲಿ ಕಿಡಿ ಹಚ್ಚಿದ ರುದ್ರನ ಮೋರೆಯಂತೆ..!
ಶುದ್ಧನಾದರೂ ಕಣದಲ್ಲಿ ವೈರಿ ತರಿಯಲು ಖಡ್ಗದ ಒರೆಯಂತೆ..
ಸಿದ್ಧನಾಗು ಕ್ಷಣದಲ್ಲಿ ತಿರಿ ಉರಿಯಲು ಅಗ್ನಿಯ ಒರೆದಂತೆ..!!
೬೪.      "ಶಿಕ್ಷಣ"
ಬೋಧನೆಗೆ ಇರಲಿ ಯೋಗ್ಯ ಗುರುವಿನ ವರಣ
ಸಾಧನೆಗೆ ಬರಲಿ ಯೋಗ ಸೂತ್ರಗಳ ಆವರಣ
ಬಾಧಿಸದೆ ಆಳ್ವಿಕೆ ತರಲಿ ಬಾಲಕರ ಶಿಕ್ಷಣಕೆ ಭರಣ
ಶೋಧಿಸುತ  ಮಾಲಿಕೆ ಬೀರಲಿ ಪಾಲಕರ ಮೆಚ್ಚಿನ ಆಭರಣ(ಮಕ್ಕಳು)
೬೫.    "ವೀರ ಸಂನ್ಯಾಸಿ"
ಮಲಗಿದ್ದ ಖಂಡ ಮೇರುಗಳ ಸಾವರಿಸಿದ ಸಂತ
ನಲುಗಿದ್ದ ಕಾಂಡ ಬೇರುಗಳ ಚಿಗುರಿಸಿದ ವಸಂತ
ಒಳಗಿದ್ದ ಭಂಡ ಸೆಣಸುಗಳ ಕಮರಿಸಿ ನೀ ಶಾಂತ
ಬೆಳಗೆದ್ದು ಕಂಡ ಕನಸುಗಳ ನಿವಾರಿಸಿ ನಿಶಾಂತ
೬೬.  "ಕಿಡಿ ನುಡಿ"
ಕನ್ನೆ ಬಿರಿದ ಹೂವಿನಂತೆ ಹತ್ತಿರ ಕೊಂಚ ಮಡುಗಿ..
ಎಣ್ಣೆ ಕರಿದ ತಾವಿನಂತೆ ಬಿಟ್ಟಿರ ಸಂಚ ಬೆಡಗಿ..
ಕಣ್ಣು ಹರಿಯಿತೊಂದು ಇಪ್ಪತ್ತರ ಅಂಚ ಹುಡುಗಿ..
ಕೆನ್ನೆ ಉರಿಯಿತಿಂದು ತತ್ತರ  ಮಿಂಚು ಗುಡುಗಿ..!!
೬೭.   "ಮಿಡಿ"
ತನು ಸುಂದರ ಮಿಡಿಯಲಿ
ಮನ ಹಗುರ ಕಾಮಿಡಿಯಲಿ
ಕ್ಷಣ ತತ್ತರ ಸಿಡಿ ಮಿಡಿಯಲಿ
ಮಣ ಕಾತರ ಅಪ್ಪೆಮಿಡಿಯಲಿ..
೬೮.    "ನನ್ನ ದೇಶ"
ಭಾವ ರಾಗ ತಾಳದಲ್ಲಿ ಹೊಂದಿರುವೆ ಲಯ..
ಜೀವ ಸರಾಗ ತೋಳಿನಲ್ಲಿ ಬೆಳೆದಿದೆ ಮಲಯ..
ಶಿವ ರಂಗಸ್ಥಳ ಬಾಳಿನಲ್ಲಿ ಕಳೆಗಟ್ಟಿದೆ ಹಿಮಾಲಯ..
ಅವನಿಯೊಳಗೆ ನೀ ನನ್ನ ಧಮನಿ ಮಹಿಮಾಲಯ..
೬೯.  "ನಾಯಕ"
ಆಗಬಯಸುವರು ಜನರೊಳಗೆ ನಾಯಕ..
ಬಾಗಿ ಕೈಕೆಸರು ಬೆವರಾಗದೆ ಕಾಯಕ
ಹುಗಿದು ನೀರೆರೆಯದೆ ಬೀಜ ಅಸಹಾಯಕ..
ಮಾಗಿ ನೆರಳಾದರೆ ಬದುಕು ಫಲದಾಯಕ..
೭೦.   "ವಿಜ್ಞಾನಿ"
ಸುಮ್ಮನಿರದೆ ಮಾಡಿಕೊಳ್ಳುವೆ ನಾ ಆತ್ಮ ಶೋಧನೆ..
ನಮಗಾಗಿ ಹಗಲಿರುಳು ನೀ ಮಾಡುವೆ ಸಂಶೋಧನೆ..
ನೆಮ್ಮದಿಯೊಳಗೆ ನಿನಗೂ ಇರಬಹುದಲ್ಲವೆ ವೇದನೆ..
ನಮನವಿದೋ ವಿಜ್ಞಾನಿಯೆ ಹೃದಯಾಳದ ಸಂವೇದನೆ..

No comments:

Post a Comment