Friday 17 February 2012

ಚುಟುಕ"೪೧-೬೦"


       ೪೧."ಲಂಚ"
ಕೆಲಸವೊಂದು ಆಗಬೇಕೆ ಗುರಾಯಿಸಿ ಅರ್ಜಿ..
ವಲಸೆ ಮಾಡುತಿರೆ ಚುಚ್ಚಿ ಗುರಾಯಿಸುವರು ಭರ್ಜಿ..
ಹೊಲಸೆ ಲಂಚವ ಕೊಡುತಿರೆ ತಿರುಗುವುದು ಮನ ಗುರ್ಜಿ,
ಲಾಲಸೆಯಿಂದ ಮುಗಿಸುವುದು ಹಣವೆಂಬ ಮರ್ಜಿ,
      ೪೨."ಗೆಲ್ಲೋಣ"
ಹುಟ್ಟುತಾ ಮನೆಯಲ್ಲಿ ವ್ಯಕ್ತಿ ಶ್ರೀಸಾಮಾನ್ಯ,
ಕಟ್ಟುತಾ ಮನದಲ್ಲಿ ವ್ಯಕ್ತ ಅಸಾಮಾನ್ಯ,
ಬಿಟ್ಠಾಕಿ ಸೋಲಲು ವೇದನೆಯ ದೈನ್ಯ,
ಒಟ್ಠಾಕಿ ಗೆಲ್ಲಲು ಸಂವೇದನೆಯೆ ಧನ್ಯ..
      ೪೩."ಕ್ರಾಂತಿಕಾರಿಗಳು"
ಅತಂತ್ರ ವಾಸದಲ್ಲಿ ಕೊಟ್ಟಿರಿ ಬಲಿ,
ಸ್ವತಂತ್ರ ದೇಶದಲ್ಲಿ ನಿಮ್ಮ ಕೀರ್ತಿ ಹಬ್ಬಲಿ,
ಜೀವವೊಂದರ ಹೊರತು ಏನಿತ್ತು ನಿಮ್ಮ ಬಳಿ,
ಭಾವವೊಂದರ ಬೆರೆತು ಗಳಿಸಿಕೊಟ್ಟಿರಿ ಉಂಬಳಿ
      ೪೪."ಪ್ರೇರಣೆ"
ವೇಷ ಹೇಗಾದರೇನು ಜೀವವೊಂದೇ..
ಭಾಷೆ ಯಾವುದಾದರೇನು ಭಾವವೊಂದೇ
ಘೋಷ ಯಾವುದಾದರೇನು ಪ್ರೇರಣೆಯೊಂದೇ
ಯಶ ಹೇಗಾದರೇನು..ಕಾರಣವೊಂದೇ..
      ೪೫."ಸರಿ-ತಪ್ಪು"
ಗುರಿ ಸೇರಲು ಇರುವುದು ಹಲವು ದಾರಿ,
ಗರಿ ಸಾರಲು ಗೆಲುವು, ನೀವಾಗಬೇಕು ಉದಾರಿ,
ಗೋರಿ ತೋಡಿದಂತೆ, ಆದರೆ ಕುರುಡು ಗಾಂಧಾರಿ,
ಗೌರಿ ಹಾಡಿದಂತೆ ಗೆದ್ದರೆ ಅದೃಷ್ಟದ ನಾಮಧಾರಿ..!
      ೪೬."ಭರವಸೆ"
ಜೀವನದ ಸಾಧನೆಯ ಛಲದಿಂದ ಸವೆಸೆ..
ನೋವಿನ ಹಾದಿಯಂತೆ ಜಾರಿಸದು ಹಾವಸೆ.
ಬೇವಿನ ಮದ್ದೆಂದು ಕಷ್ಟ ನಷ್ಟಗಳ ಭಾವಿಸೆ..
ಭಾವಿಯಲ್ಲಿ ಕಾಣುವುದು ಬೆಳಕಿನ ಭರವಸೆ.
       ೪೭."ಸಿಂಹಾವಲೋಕನ"
ವಿಚಾರ ಮಾಡುವೆನು ನಿಮ್ಮಸಮಕ್ಷಮ,
ಆಚಾರ ನೋಡುವುದು ಯೋಗಕ್ಷೇಮ,
ಗೋಚರರಹಿತ ತಪ್ಪಾಡಿದ್ದರೆ ಬೇಡುವೆನು ಕ್ಷಮಾ,
ಪ್ರಚಾರವಿದು ಕೈಗೂಡದಿರಲಿ ನೆಮ್ಮದಿಯ ಕ್ಷಾಮ..
       ೪೮."ಗುಣನಡತೆ"
ಮಾತಲ್ಲಿ ತುಂಬಿರಲಿ ಮಾಧುರ್ಯ..
ಮನದಲ್ಲಿ ಕುಂದಿರಲಿ ಮಾತ್ಸರ್ಯ..
ಗುಣದಲ್ಲಿ ಹೆಚ್ಚುವುದು ಸೌಂದರ್ಯ..
ಹಣದಲ್ಲಿ ಮುಚ್ಚುವುದು ಸೌಕರ್ಯ..
        ೪೯."ಬೆರೆತು ಬದುಕು"
ಶಿಷ್ಟ ಜನರಿಗೆ ಮಾಡು ಹಾರೈಕೆ,
ಕಷ್ಟದಲ್ಲಿರುವವಗೆ ನೀಡು ಮುನ್ನ ಆರೈಕೆ,
ದುಷ್ಟ ಜನರೊಂದಿಗೆ ವ್ಯರ್ಥ ಓಲೈಕೆ,
ಇಷ್ಟವಾಗುವುದು ನೋಡಾ ಜಗದಿ ನಿನ್ನ ಮೇಳೈಕೆ..
         ೫೦."ಮಂದಹಾಸ"
ಮುಗ್ಧ ಸಜ್ಜನರ ಪ್ರೇಮದಿ ರಮಿಸು,
ಸ್ನಿಗ್ಧ ನೆಮ್ಮದಿಯ ಮುಖದಲ್ಲಿ ವಿರಮಿಸು,
ಬದ್ಧ ವೈರಿಗಳ ಹೃದಯವನೆ ಆಕ್ರಮಿಸು,
ಸಿದ್ಧ ಮುನಿಗಳ ಮನೋವೇಗದಿ ಕ್ರಮಿಸು.
          ೫೧."ವಸುಧೆ"
ಭೂಮಿಯೊಂದು ಜೀವಜಲ ಜನ್ಯ..
ನೇಮದಿಂದ ಸುರಿದರೆ ಪರ್ಜನ್ಯ..
ಸಮ್ಮಾನವದು ಹಸಿದ ಜೀವಿಗಳಿಗೆ ಧಾನ್ಯ...
ಬ್ರಹ್ಮನೇ ಪರಿಶ್ರಮಿಗೆ ಕೊಡುವ ಪ್ರಾಧಾನ್ಯ,
           ೫೨."ಸೈನಿಕರು"
ತರಿಯುವರು ಮೊಂಡ ವೈರಿಗಳ ಕತ್ತು,
ಸರಿಯವರು ಭಾರತೀಯ ಸೇನೆ ತಾಕತ್ತು,
ಉರಿಯುವರು ನಿರ್ವೀರ್ಯ ಸರ್ಕಾರ ಪದಕ ಕಿತ್ತು,
ಅರಿಮುರಿಯಲು ಯೋಧರಿಗೆ ಸರ್ದಾರ ಬೇಕಿತ್ತು.
            ೫೩."ಮಾತು-ವ್ಯವಹಾರ"
ವಿವೇಕ ಇದ್ದವನ ಉಪದೇಶ ಹಿತ,
ವಿವಿಧ ಯಶಸ್ಸು ನಮಗಾಗಿ ಸನ್ನಿಹಿತ,
ವಿವಾದಶೀಲಿಗಳ ಉದಾಸೀನ ವಿಹಿತ,
ವಿವರಿಸಿದರೂ ವ್ಯರ್ಥ ಉದಾಹರಣೆ ಸಹಿತ
          ೫೪."ಭಾವನೆ"
ದೃಷ್ಟವಿರುವುದ ಸೆರೆ ಹಿಡಿಯಲು ಲೋಚನೆ..
ಅದೃಷ್ಟದ ಬಾಗಿಲು ತೆರೆಯಲು ಆಲೋಚನೆ..
ಸ್ಪಷ್ಟಪಡಿಸಲು ಮಥಿಸಿಕೊಳ್ಳುವುದು ಯೋಚನೆ...
ಇಷ್ಟವಾಗದೆ ಮಧುರ ಭಾವಗಳ ವಿವೇಚನೆ...?
          ೫೫."ವಿಷಮ-ರಸ"!
ಹುಡುಗಿ ಸಿಕ್ಕರೆ ಮೊದಲು ಕೂಲ್ ಬಾರ್
ಹುಡುಕಿ ಸಿಕ್ಕದಿರೆ ಮಾಡಲು ಕಾಲ್ ಬಾರ್.!
ಮದುವೆಯಾದೊಡೆ ಜೀವನ ಸಾಂಬಾರ್
ನಡುವೆ ಕಾದೊಡೆ ನವೀನ ಸಿಮ್ ಬಾರ್...!!
         ೫೬."ಜನ-ನಡತೆ"
ಕೆಲವರು ಮಾಡುವರು ದಬ್ಬಾಳಿಕೆ..
ಗೆಲ್ಲುವರು ಹೊಂದಿಕೊಂಡರೆ ಬಾಳಿಕೆ..
ಪ್ರಶಸ್ತವದು ತಿದ್ದಿಕೊಳ್ಳಲು ಕೇಳಿಕೊಂಡ ತೆಗಳಿಕೆ..
ಯಶಸ್ಸಿಗೇರಿದರೆ ಗಳಿಕೆಯೊಂದು ಹೊಗಳಿಕೆ..
        ೫೭."ಕಷ್ಟದಲ್ಲಿ-ಇಷ್ಟ"
ತೂತನ್ನು ಹೊಂದಿರುವುದು ಬದುಕೆಂಬ ಕೊಳಲು
ಮಾತನ್ನು ಕಂಡಿರುವುದು ಒಡಕೆಂಬ ಅಳಲು
ನುಡಿಸಲದು ಸಮಚಿತ್ತದಿ ಮಧುರಸ್ವರ ಕೇಳಲು
ಬಿಡಿಸಲದು ಕ್ಷಣಕಿತ್ತದೀ  ಮಂಗಳಕರ ಬಾಳಲು..
        ೫೮."ಸ್ವತಃ ಶುದ್ಧರಾಗಿ"
ನಮ್ಮಲ್ಲಿ ಸ್ವಚ್ಛವಿಲ್ಲದಿರೆ ತೊಳೆಯುವುದು ಕನ್ನಡಿಯನೇ.?
ಹಮ್ಮಿನ ಮುಚ್ಚಳ ತೆರೆಯದೆ ಹೇಳುವುದು ಚೆನ್ನುಡಿಯನೇ..?
ಸುಮ್ಮನೇ ಹೆಚ್ಚಾಗಿ ತಂದೆತಾಯಿಯ ಹಳಿದು ಇನ್ನೊಡೆಯನೇ..?
ಒಮ್ಮೆಯೂ ನೆಚ್ಚದಿರೆ ದೇವ ನಮ್ಮ ಬಿಟ್ಟು ಮುನ್ನಡೆಯನೇ..?
        ೫೯."ಬದುಕು"
ನೀವು ಕೇಳುವಿರಿ ಆರಾಮ
ನಾವು ಮಾಡುವೆವು ವಿರಾಮ
ನೋವು ಇದ್ದರೇನು ಹರಾಮ
ಕಾವುದೆಮ್ಮನು ಆ "ರಾಮ"
        ೬೦."ಸಾಲುಮರ"
ನೆರಳು.ಹಣ್ಣು ನೀಡುವುದು ರಸ್ತೆಯ ಸಾಲುಮರ
ಇರುಳುಗಣ್ಣಿನಲಿ ಕಡಿಯುವ ಅದ ಮಾನವ ಭ್ರಮರ
ಕರುಳು ಕೂಗದೇ ತಿಮ್ಮಕ್ಕನದು,ನರ ತಾ ವ್ಯರ್ಥ ಅಮರ
ಬೆರಳ ನೋವಿಗೆ ಕೊರಳ ಕತ್ತರಿಸುವ ಇದು ಮೋಸ ಸಮರ

No comments:

Post a Comment