Thursday, 12 January 2012

ಚುಟುಕ "೨೧-೪೦"


 "ಜಗ-ಜನ"
೨೧.ಸಂಪತ್ತು ಬಂದಾಗ ಮೆರೆಯುವರು..
ಜಗತ್ತು ಮುಂದಾಗಿ ಮರೆಯುವರು..
ಆಪತ್ತು ಎಂದಾಗ ಮೊರೆಯುವರು
ಕೊನೆಗೆ ಕತ್ತು ಮುಂಬಾಗಿ ಮುರಿಯುವರು..!!
"ಸೃಷ್ಟಿ-ದೃಷ್ಟಿ"
೨೨..ನಿಸರ್ಗವೊಂದು  ಆತನ ಸೃಷ್ಟಿ..
ಪೊರೆಯುವುದು ನಿತ್ಯ ನಿರಂತರ ವೃಷ್ಟಿ..
ಸ್ವರ್ಗವೆಂದು  ತಿಳಿಯೆ ಚಿಂತನ ದೃಷ್ಟಿ..
ಅರಿಯವುದು ಸತ್ಯ ಅನಂತ ಸಮಷ್ಟಿ...
"ಮಾತು-ಮಂಥನ"
೨೩.ಬಂದು ಕೇಳುವಿರೆ ರುಚಿರ ಮಾತಿನ..
ಹೊಂದಿ ಬಾಳುವಿರೈ ಚಿರ ನೂತನ..
ಇಂದು ಕಾಣುವುದು ತಾರ ದೂರದಿ..
ಮುಂದೆ ತಾಣವದು ಚಿತ್ತಾರ ತೀರದಿ...
"ಮಗಳು"
೨೪.ದೂರದಿರಿ ಹೆಣ್ಣೆಂದು ಮಗಳ..
ಅರಿತಿರಿ ಪುಣ್ಯವದು ಜನುಮಗಳ..!
ತೊಲಗುವುದು ಬರಡುಮನ ಗಲ್ಲಿ
ಬೆಳಗುವುದು ಎರಡುಮನೆ ಜಗಲಿ...!!
"ಕಲಿಕೆ"
೨೫.ಬೀಳುವುದು ಸಹಜ ಮೊದಲು
ಹೇಳುವುದು ಶುರು ನಿಜ ತೊದಲು
ಹೊರಳಿ ಕಲಿಯದೆ ಸಾಧ್ಯವೆ ನಡೆಯಲು
ಮರಳಿ ಉಲಿಯದೆ ವೇದ್ಯವೆ ನುಡಿಯಲು
"ಹೊಂದಾಣಿಕೆ"
೨೬.ಬದುಕಲು ಇರುವುದು ಹೊಟ್ಟೆಪಾಡು
ಬದುಕಿಸಲು ಬರುವುದು ಕಟ್ಟುಪಾಡು
ಬದುಕಿನಲಿ ಹೊಂದಿರಲು ಮಾರ್ಪಾಡು
ಬದುಕುವಿರಿ ಹಗಲಿರುಳ ಏರ್ಪಾಡು...!!
"ತೃಪ್ತಿ"
೨೭.ಎಷ್ಟು ದಿನ ಇರಬಲ್ಲೆ ನೀ ನಗದೇ..?
ಕಷ್ಟ ಚಿನ್ನ ತರಲಾರೆ ನಾ ನಗದೇ...!
ತೃಪ್ತಿಯಿರೆ ಅಷ್ಟು ಸಾಕು ಅವನಿಗದೇ..
ವ್ಯಾಪ್ತಿಮೀರೆ ನಷ್ಟಭಾಕ್ ಅವನೀ-ಗಾದೆ...!(ಅವನಿ=ಭೂಮಿ)
"ಮಾಯಾಜಾಲ"
೨೮.ನಲ್ಲೆ ನನಗೆ ಸಿಕ್ಕಳೆಂದು ತಬ್ಬಿದ್ದೆ..
ಬಲ್ಲೆ ನೀ ನನ್ನನೆಂದು ಉಬ್ಬಿದ್ದೆ..
ಒಳ್ಳೇ ಮನದನ್ನೆ ಆಗುವಳೆಂದು ನಂಬಿದ್ದೆ
ಸುಳ್ಳೇ ನೀ ಆಡಿದ್ದೇಕೆ ನಾ ಬಿದ್ದೆ...!
"ಮಾತು-ವ್ಯವಹಾರ"
೨೯.ಸ್ವಚ್ಛವಾಗಿರಲಿ ನಿಮ್ಮ ಮನದಾಳ
ತುಚ್ಛ ಯಾಕಿರಲಿ ಸುಮ್ಮನೇ ಮನ-ದಾಳ
ಹೆಚ್ಚು ಬಾಡದಿರಲಿ ಸೂಕ್ಷ್ಮ ಮನ -ದಳ.
ಕೊಚ್ಚಿ ಹೋಗದಿರಿ ಭಸ್ಮಮಾಗೆ ಮನತಳ
"ವಿವೇಕ"
೩೦.ಸಾಧಿಸಲು ಸಾಲದು ಕೇವಲ ಇಯತ್ತೆ (ವಿದ್ಯಾಭ್ಯಾಸ)
ಭೇದಿಸಲು ಕೇಳದು ಭೀಮಬಲ ನೋಯತ್ತೆ..!
ಬಲಿತಾಗ ಬೆಳೆಯಬೇಕು ಬುದ್ಧಿಮತ್ತೆ..
ಸೋತಾಗ ಹೊಳೆಯುವುದು ಬುದ್ಧಿ... ಮತ್ತೆ...!
"ಗುರು"
೩೧.ಗುರುಬಲವು ಜ್ಞಾನದೀವಿಗೆ ಹಚ್ಚಿತ್ತ..
ಗುರಿಯೆಡೆಗೆ ಸಾಗುವ ಛಲದ ಕಿಚ್ಚಿತ್ತ..
ಗುರುತರ ಸಮಸ್ಯೆಗಳ ಪರಿಹರಿಸೆ ಮೆಚ್ಚಿತ್ತ..
ಗರಿಕೆಯಂದದಿ ನಿವಾರಿಸಿತೆ ನಿನ್ ಚಿತ್ತ..?
"ಜನ್ಮದಿನ"
೩೨."ಸಾವಿರ"ದ ವರ್ಷ ಬೇಡ  ಕಲ್ಲಿನಂತೆ ಸಂಪಿನಲಿ
"ಸಾವಿ"ರದ ಹರ್ಷ ನೋಡು ಮಲ್ಲಿಗೆಯ ಕಂಪಿನಲಿ
ನೂರ್ಕಾಲ ಬಾಳು ನೀ ನೋವಿರಲಿ ನಲಿವಿರಲಿ
ಮೂರ್ಕಾಲ ಮುಪ್ಪಿನಲಿ ಜನಕೆ ಜನ್ಮದಿನ ನೆನಪಿರಲಿ..!
(ಲೋಕ ಮೆಚ್ಚುವ ಕೆಲ್ಸ ಮಾಡಿದ್ರೆ ಜನ ನಮ್ಮ ಜನ್ಮದಿನ ನೆನಪಿಸಿಕೊಳ್ಳುವರು..)
"ಭೂಮಿ"
೩೩.ಹುಡಿಯಾಗದಿರಲಿ ಭೂಮಿ ಭಿತ್ತಿಯ ಒಡಲು
ಕರುಳು ಹಿಂಡದೇ ನೆಲದ ನೆತ್ತಿಯ ಒಡೆಯಲು...?
ದುಡುಕಿ ಕದಡದಿರಿ ಸ್ವಾಮಿ ಗುತ್ತಿಗೆಯೆ ಕಡಲು..?
ಮರುಳು ಮಂಡೆಯೇ ಜಲದ ಬುತ್ತಿಯ ಕಡೆಯಲು...?
"ಜಗ-ಜೀವನ"
೩೪.ಉಳಿಯಬಹುದೆ ನಮಗೆ ಸ್ನೇಹಮಯ ಪ್ರಪಂಚ..?
ಅಳಿಯಬಹುದಾದರೆ ಅತ್ಯಾಸೆಯ ಇಂದ್ರಿಯ ಪಂಚ..!
ಗಳಿಸಬಹುದೆ ನಾವು ಸಾಧನೆಯ ಜಗತ್ತು....?
ಕಳಿಸಬಹುದಾದರೆ ನಮ್ಮ ಲೋಭದ ಗತ್ತು....!!
"ಮನಃಶುದ್ಧಿ"
೩೫.ಕಣದೊಳಗೂ ದೇವರೆಂದು ಇದ್ದರೆ ಭಕ್ತಿ..
ಮನದೊಳಗೆ ಉಂಟಾಗದು ಶಬ್ದಗಳ ವಿಭಕ್ತಿ..!
ಜನರೊಳಗೆ ನಂಟಾಗಲು ಕಾರಣ ಭಜನೆ..
ಗುಣದೊಳಗೆ ಗಂಟಾಗಲು ಹೂರಣ ವಿಭಜನೆ...!
"ಮಕ್ಕಳ ಪಾಲನೆ"
೩೬.ಮಗುವಿನಲ್ಲಿ ನಗೆಯನ್ನು ಧರಿಸು..
ಯೋಗ್ಯತೆಯಲ್ಲಿ ಯೋಗವನ್ನು ನಿರ್ಧರಿಸು..
ಮಿತಿಯಲ್ಲಿ ಮತಿಯನ್ನು ಹೆದರಿಸು..
ಬೆಳಕಿಗಾಗಿ ಬಾಳುವಿಕೆಗಾಗಿ ಸುಧಾರಿಸು..
"ಮಲ್ಲಿ-ಮಲ್ಲಿಗೆ"
೩೭.ನವಿರಾದ ಕಂಪನೀಡಿ ಏಕೆ ಕಾಡುವೆ ಮಲ್ಲಿಗೆ..?
ಸವಿಯಾದ ಕಂಪನಿಗಾಗಿ ಎಂದು ಬರುವೆ ನಮ್ಮಲ್ಲಿಗೆ..?!
ಕವಿಯಾದ ಪಂಪನಿಗಾಗಿ ಹೋದೆಯಾ ಹುಬ್ಬಳ್ಳಿಗೆ..?
ಜೀವಿಯಾದ ನೆನಪಿಗಾಗಿ ತರು ಬೇಡವೆ ಬಳ್ಳಿಗೆ...?!
"ರಾಜಕಾರಣಿ"
೩೮.ಸ್ವಂತಕ್ಕೆ ಗೆಲ್ಲಲು ಅಧಿಕಾರ,
ಅಂತಕ್ಕೆ ಸೋತಾಗ ಧಿಕ್ಕಾರ...!!
ಗೆದ್ದಾಗ ಮಂತ್ರಿಗಳ ಪ್ರಕಾರ,
ಬಿದ್ದಾಗ ಕುತಂತ್ರಿಗಳ ಪ್ರತೀಕಾರ...!!
"ಕೃತಘ್ನತೆ"
೩೯.ದಾರಿದ್ರ್ಯದಿ ಬೇಕು ತಾಯಿ ನೀಡುವ ಅನ್ನ..
ದಾರಿ ಕಂಡರೆ ಸಾಕು ಬಾಯಿ ಗೋಡೆಗೇ ಕನ್ನ,
ದೂರಿಕೊಳ್ಳುವರು ಸತ್ಯ ತಿಳಿಯುವ ಮುನ್ನ,
ದೊರಕುವುದೇ ಮಿಥ್ಯ ಅಳಿಯದೇ ಮನ್ನಾ...?
"ಚಿತ್ತ ಶುದ್ಧಿ"
೪೦.ಶುದ್ಧವಾಗಿರಬೇಕು ನಮ್ಮಮನೆ ಬಚ್ಚಲು,
ಯುದ್ಧ ಮಾಡದಿರಿ ಮನದೊಳಗೆ ಬೆಚ್ಚಲು,
ಬುದ್ಧಿ ಓಡಿಸಿರಿ ಅವಕಾಶದ ಹಾದಿ ಮುಚ್ಚಲು,
ಬದ್ಧವಾಗಿರಿ ಜನಕೆ ನಿಮ್ಮ ಸಾಧನೆಯ ಮೆಚ್ಚಲು.

No comments:

Post a Comment